ಮೇಘನಾ ಸೆಲ್ಪಿ ಮಮ್ಮಿ ಸೃಜನ್ ಗೂಗಲ್ ಡ್ಯಾಡಿ

google dad feb 20 2020
Published on

ತ್ತೀಚಿನ ದಿನಗಳಲ್ಲಿ ಮೊಬೈಲ್​ಫೋನ್ ಗೀಳು ಎಲ್ಲರ ಬದುಕನ್ನೂ ಆವರಿಸಿದೆ. ಇಂಥ ಕಥಾವಸ್ತುವನ್ನು ಇಟ್ಟುಕೊಂಡು ‘ಸೆಲ್ಪಿ ಮಮ್ಮಿ, ಗೂಗಲ್ ಡ್ಯಾಡಿ’ ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಸಿನಿಮಾ ಮಾಡಲಾಗಿದೆ.

‘ಸೈಬರ್ ಯುಗದೋಳ್ ನವಯುಗ ಪ್ರೇಮಕಾವ್ಯ’, ‘ವಾಸ್ಕೋಡಗಾಮ’ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಮಧುಚಂದ್ರ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಸೆಲ್ಪಿ ಮಮ್ಮಿ ಆಗಿ ಮೇಘನಾ ರಾಜ್, ಗೂಗಲ್ ಡ್ಯಾಡಿ ಆಗಿ ಸೃಜನ್ ಲೊಕೇಶ್ ನಟಿಸಿದ್ದಾರೆ.

‘ಯಾರ ಮನೆಗೆ ಹೋದರೂ ಅಲ್ಲಿ ಎಲ್ಲರೂ ಮೊಬೈಲ್​ಫೋನ್​ಗೆ ಅಂಟಿಕೊಂಡಿರುತ್ತಾರೆ. ಇಂತಹ ಸಾಕಷ್ಟು ಸನ್ನಿವೇಶಗಳನ್ನು ನೋಡಿದಾಗ ನನಗೆ ಈ ಕಥೆ ಹೊಳೆಯಿತು. ಇದನ್ನು ಪರಿಚಯ ಇರುವವರ ಬಳಿ ಹೇಳಿದೆ. ಎಲ್ಲರೂ ಮೆಚ್ಚಿಕೊಂಡು, ಅವರೇ ಮುಂದೆ ಬಂದು ನಿರ್ಮಾಣ ಮಾಡಿದ್ದಾರೆ. ಒಂದೇ ಶಾಲೆಗೆ ಹೋಗುವ ಮಕ್ಕಳ ಪಾಲಕರೇ ಈ ಚಿತ್ರದ ನಿರ್ವಪಕರು. ನನ್ನ ಪ್ರಕಾರ ಪ್ರತಿ ಕುಟುಂಬಕ್ಕೂ ಕನೆಕ್ಟ್ ಆಗುವ ಕಥೆ ಇದು’ ಎಂದರು ನಿರ್ದೇಶಕ ಮಧುಚಂದ್ರ.

‘ಮನೆಯಲ್ಲಿ ನನ್ನ ಮಗನೂ ಮೊಬೈಲ್​ಫೋನ್​ಗೆ ಅಡಿಕ್ಟ್ ಆಗಿದ್ದಾನೆ. ಹಾಗಾಗಿ ಮಧು ನನಗೆ ಬಂದು ಕಥೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದೇನೆ. ಮೊಬೈಲ್​ಫೋನ್​ನಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ನಾಯಕ ಸೃಜನ್ ಮಾತು. ‘ನಾನು ಈ ಕಥೆ ಕೇಳಿದಾಗ, ಮೊನ್ನೆಯಷ್ಟೇ ಮದುವೆಯಾಗಿದ್ದೇನೆ ಇಷ್ಟು ಬೇಗ ಎರಡು ಮಕ್ಕಳ ತಾಯಿಯ ಪಾತ್ರ ಮಾಡಬೇಕಾ ಅನಿಸಿತು. ಆಮೇಲೆ ಕೊಂಚ ಯೋಚಿಸಿದಾಗ ಈ ಕಥೆ ಮಿಸ್ ಮಾಡಿಕೊಂಡರೆ ಒಳ್ಳೆಯ ಸಿನಿಮಾ ಮಿಸ್ ಆಗುತ್ತದೆ ಎಂದು ತೀರ್ವನಿಸಿ ಒಪ್ಪಿದೆ. ಮೆಸೇಜ್ ಜತೆಗೆ ಸಿಕ್ಕಾಪಟ್ಟೆ ಮನರಂಜನೆಯೂ ಚಿತ್ರದಲ್ಲಿದೆ’ ಎನ್ನುತ್ತಾರೆ ಮೇಘನಾ ರಾಜ್. ‘ಬಾಹುಬಲಿ-2’ ಚಿತ್ರಕ್ಕೆ ಸಹಾಯಕ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡಿದ್ದ ರವೀಂದ್ರನಾಥ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸೃಜನ್ ಪುತ್ರನ ಪಾತ್ರದಲ್ಲಿ ನಟಿ ರೂಪಾ ಪ್ರಭಾಕರ್ ಅವರ ಪುತ್ರ ಅಲಾಪ್ ಕಾಣಿಸಿಕೊಂಡರೆ, ಬೇಬಿಶ್ರೀ ಎಂಬ ಬಾಲಕಿ ಪುತ್ರಿಯಾಗಿ ನಟಿಸಿದ್ದಾರೆ. ಇದೇ ವೇಳೆ ಸಿನಿಮಾದ ಟೀಸರ್ ಕೂಡ ರಿಲೀಸ್ ಆಯಿತು. ‘ಡಿ ಬೀಟ್ಸ್’ನ ಮಾಲಕಿ ಶೈಲಜಾ ನಾಗ್, ‘ಚಿತ್ರ ಟೈಟಲ್​ನಷ್ಟೇ ಕ್ಯಾಚಿಯಾಗಿದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net