

ಬೆಂಗಳೂರು : ಕನ್ನಡದ ‘ಮಾರ್ಚ್ 22’, ‘ಕೃಷ್ಣ ತುಳಸಿ’, ‘ಕದ್ದುಮುಚ್ಚಿ’ ಖ್ಯಾತಿಯ ನಟಿ ಮೇಘಶ್ರೀ ಸದ್ಯ ಭೋಜಪುರಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಿಜಿ ನಡುವೆಯೇ ಅವರು ನವರಾತ್ರಿ ಸಂಭ್ರಮದಲ್ಲಿದ್ದು, ಈ ಬಾರಿಯ ದಸರಾ ಡಬಲ್ ಖುಷಿ ತಂದಿದೆ. ಹೌದು, ‘ರಾಜಾಮಾರ್ತಾಂಡ’ ತೆರೆಕಂಡ ಮೂರು ವರ್ಷಗಳ ಬಳಿಕ ಮೇಘಶ್ರೀ ನಟನೆಯ ಕನ್ನಡ ಚಿತ್ರವೊಂದು ದಸರಾ ಸಮಯದಲ್ಲಿ ರಿಲೀಸ್ ಆಗಿದೆ. ಈ ಮಧ್ಯೆ ಹೊಸ ಸಿನಿಮಾ ಸಹಿ ಮಾಡಿದ್ದಾರೆ. ಇದೇ ಖುಷಿಯಲ್ಲಿ ಮೇಘಶ್ರೀ ದಸರಾ ಹಾಗೂ ಹಬ್ಬದ ನೆನಪುಗಳ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘ಪ್ರತಿ ವರ್ಷ ದಸರಾ ಸಮಯದಲ್ಲಿ ಮನೆಯಲ್ಲಿ ಇರುತ್ತಿದ್ದೆ. ಆಗ ಅದ್ದೂರಿಯಾಗಿ ಆಚರಿಸುತ್ತಿದ್ದೆವು. ನವರಾತ್ರಿ ವೇಳೆ ವ್ರತ ಕೂಡ ಕೈಗೊಳ್ಳುತ್ತಿದ್ದೆ. ಆದರೆ, ಈ ಬಾರಿ ಶೂಟಿಂಗ್ ಇದೆ. ಸದ್ಯ ನಾನು ಮುಂಬೈನಲ್ಲಿದ್ದೇನೆ. ಹಬ್ಬವನ್ನು ಮನೆಯಲ್ಲಿ ಆಚರಿಸಲಾಗುತ್ತಿಲ್ಲ. ಕೆಲಸವೇ ಹಬ್ಬವಾಗಿದೆ. ಇನ್ನು ಚಿಕ್ಕಂದಿನಿಂದಲೂ ಮೈಸೂರು ದಸರಾದ ಹಲವು ನೆನಪುಗಳಿವೆ. ಪ್ರತಿ ದಸರಾ ಹಬ್ಬದ ಸಮಯದಲ್ಲೂ ಅಪ್ಪ ನಮ್ಮನ್ನು ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಅಂಬಾರಿ ಮೆರವಣಿಗೆ, ಚಾಮುಂಡಿ ಬೆಟ್ಟ ನೋಡಿ ಖುಷಿಪಡುತ್ತಿದ್ದೆ. ಮೊದಲಿನಿಂದಲೂ ನನಗೆ ಮೈಸೂರು ದಸರಾ ಜತೆ ನಂಟಿದೆ. ಇನ್ನು ‘ಕೃಷ್ಣ ತುಳಸಿ’ ಚಿತ್ರದ ಶೂಟಿಂಗ್ ಕೂಡ ನವರಾತ್ರಿ ಸಮಯದಲ್ಲಿ ಅರಮನೆ ಮುಂಭಾಗದಲ್ಲಿಯೇ ನಡೆದಿತ್ತು. ‘ಕದ್ದುಮುಚ್ಚಿ’ ಚಿತ್ರದ ಪ್ರಚಾರವನ್ನು ಯುವ ದಸರಾದಲ್ಲಿ ಮಾಡಿದ್ದೆವು. ದೇವಿ ಕೃಪೆ ಇರಬೇಕು ಈ ಎರಡು ಸಿನಿಮಾಗಳು ನನ್ನ ವೃತ್ತಿ ಬದುಕಿಗೆ ಒಳ್ಳೆಯ ಹೆಸರು ತಂದುಕೊಟ್ಟವು. ಇನ್ನು ದಸರಾ ಅಂದರೆ ಸಾಕು ಅದು ಕನ್ನಡ ಹಬ್ಬ, ನಾಡಹಬ್ಬ ಅಂತ ಮನಸ್ಸಿಗೆ ಬರುತ್ತದೆ. ಇಂತಹ ಸಂದೇಶ ಸಾರುವ ಹಬ್ಬವನ್ನು ಎಲ್ಲರೂ ಅದ್ದೂರಿಯಾಗಿಯೇ ಆಚರಿಸೋಣಾ’ ಎಂದು ಖುಷಿ ಹಂಚಿಕೊಂಡರು.
ಹಬ್ಬಕ್ಕೆ ಸಿನಿಮಾ ಬಿಡುಗಡೆ: ಮೇಘಶ್ರೀ ಅಭಿನಯದ ‘ಕುಂಟೆಬಿಲ್ಲೆ’ ಇಂದು ತೆರೆ ಕಂಡಿದೆ. ‘ಇದು ಗ್ರಾಮೀಣ ಸೊಗಡಿನ ವಿಭಿನ್ನ ಕಥೆ. ನಾನಿಲ್ಲಿ ಹಳ್ಳಿ ಹುಡುಗಿಯಾದರೂ, ಬೋಲ್ಡ್ ಪಾತ್ರದಲ್ಲಿ ನಟಿಸಿದ್ದೇನೆ. ತುಂಬಾ ವರ್ಷಗಳ ಬಳಿಕ ದಸರಾ ವೇಳೆ ನನ್ನ ಸಿನಿಮಾ ಬಿಡುಗಡೆಯಾಗಿರುವುದು ನನ್ನ ಭಾಗ್ಯ. ಸದ್ಯದಲ್ಲೇ ಕನ್ನಡದ 2-3 ಸಿನಿಮಾಗಳು ಸೆಟ್ಟೇರಲಿವೆ’ ಎಂದು ಮಾಹಿತಿ ನೀಡುತ್ತಾರೆ.