ಅಭಿನಯಕ್ಕೆ ವಾಪಸಾದ ಮೇಘನಾ: ಚಿರು ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಘೋಷಣೆ

Meghana
Published on

ಬೆಂಗಳೂರು: ಎರಡು ವರ್ಷಗಳ ಹಿಂದೆ ಸೃಜನ್ ಲೋಕೇಶ್ ಅಭಿನಯದ ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’ ಎಂಬ ಚಿತ್ರ ಒಪ್ಪಿದ್ದೇ ಕೊನೆ, ಆ ನಂತರ ಮೇಘನಾ ರಾಜ್ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿರಲಿಲ್ಲ. ಅದರಲ್ಲೂ ಕಳೆದೊಂದೂವರೆ ವರ್ಷಗಳಲ್ಲಿ ಮೇಘನಾ ಜೀವನದಲ್ಲಿ ಏನೆಲ್ಲ ಆಯಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಇದೆಲ್ಲದರಿಂದ ಅಭಿನಯದಿಂದ ದೂರವೇ ಉಳಿದಿದ್ದ ಮೇಘನಾ ಈಗ, ಹೊಸ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇಘನಾ ಅಭಿನಯದ ಹೊಸ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ. ಈ ಚಿತ್ರವನ್ನು ಪನ್ನಗಾಭರಣ, ವಾಸುಕಿ ವೈಭವ್, ವಿಶಾಲ್ ಮುಂತಾದವರು ಸೇರಿ ಪಿ.ಬಿ ಸ್ಟುಡಿಯೋಸ್​ನಡಿ ನಿರ್ವಿುಸುತ್ತಿದ್ದಾರೆ.

ಈ ಹಿಂದೆ ‘ಹ್ಯಾಪಿ ನ್ಯೂ ಇಯರ್’ ಮತ್ತು ‘ಫ್ರೆಂಚ್ ಬಿರಿಯಾನಿ’ ಚಿತ್ರಗಳನ್ನು ನಿರ್ದೇಶಿಸಿರುವ ಪನ್ನಗಾಭರಣಗೆ ನಿರ್ವಪಕರಾಗಿ ಇದು ಮೊದಲ ಚಿತ್ರ. ಈ ಕುರಿತು ವಿಜಯವಾಣಿ ಜತೆಗೆ ಮಾತನಾಡಿದ ಅವರು, ‘ಸಿನಿಮಾ ನಿರ್ಮಾಣ ಮಾಡಬೇಕು ಎಂಬುದು ನನ್ನ ಮತ್ತು ಚಿರು ಕನಸಾಗಿತ್ತು. ಆದರೆ, ಎಲ್ಲವೂ ಕೂಡಿಬರಬೇಕು ಎನ್ನುವಷ್ಟರಲ್ಲಿ ಅವನೇ ಇಲ್ಲ. ಹಾಗಾಗಿ ಅವನ ನೆನಪಲ್ಲಿ ಅವನ ಹುಟ್ಟುಹಬ್ಬದಂದೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ.

‘ನಾವು ಸಿನಿಮಾ ಮಾಡಬೇಕು ಎಂದು ಕಥೆ ಹುಡುಕುತ್ತಿದ್ದಾಗ, ವಿಶಾಲ್ ಎನ್ನುವವರು ಕಥೆ ತೆಗೆದುಕೊಂಡು ಬಂದರು. ಆ ಕಥೆ ಕೇಳಿ ಥ್ರಿಲ್ ಆಯಿತು. ಹಾಗಾಗಿ, ಅವರ ನಿರ್ದೇಶನದಲ್ಲಿ ಈ ಚಿತ್ರ ನಿರ್ವಿುಸುವ ತೀರ್ವನಕ್ಕೆ ಬಂದಿದ್ದೇವೆ. ಈ ಚಿತ್ರದಲ್ಲಿ ಹಲವು ಪ್ರಮುಖ ಪಾತ್ರಗಳಿವೆ. ಅದರಲ್ಲಿ ಒಂದು ಪಾತ್ರವನ್ನು ಮೇಘನಾ ಅವರಿಂದ ಮಾಡಿಸಿದರೆ ಹೇಗಿರುತ್ತದೆ ಎಂಬ ಯೋಚನೆ ಬಂತು. ಅವರಿಗೆ ಕಥೆ ಹೇಳಿದಾಗ, ಅವರಿಗೂ ಖುಷಿಯಾಯಿತು. ಅವರೂ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಇದೊಂದು ಕ್ರೖೆಮ್ ಥ್ರಿಲ್ಲರ್. ಇಂದು ಚಿತ್ರದ ಘೋಷಣೆಯಾಗುತ್ತಿದೆ. ಶೂಟಿಂಗ್​ಗೆ ಇನ್ನೂ ಸಮಯವಿದೆ. ವಾಸುಕಿ ಸಂಗೀತ ಸಂಯೋಜಿಸುತ್ತಿದ್ದಾರೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಾಗಬೇಕಿದೆ. ಇನ್ನು, ಒಂದಿಷ್ಟು ಶೀರ್ಷಿಕೆಗಳಿವೆ. ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ’ ಎನ್ನುತ್ತಾರೆ ಪನ್ನಗಾಭರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net