

ಬೆಂಗಳೂರು: ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಪುತ್ರನಿಗೆ ಗುರುವಾರ ತೊಟ್ಟಿಲು ಶಾಸ್ತ್ರ ನೆರವೇರಿದೆ. ಚಿರು ಅಗಲಿಕೆಯ ನೋವಿನಲ್ಲಿದ್ದ ಎರಡೂ ಕುಟುಂಬದ ಮೊಗದಲ್ಲಿ ಜೂನಿಯರ್ ಚಿರು ಆಗಮನ ಖುಷಿಯ ಬುತ್ತಿ ತಂದಿದ್ದಾನೆ. ಚಿರು ನಿಧನದ ಬಳಿಕ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಮೇಘನಾ, ಜೂ.ಚಿರು ತೊಟ್ಟಿಲ ಶಾಸ್ತ್ರದ ಶುಭದಿನದಂದು ಮನಬಿಚ್ಚಿ ಮಾತನಾಡಿದ್ದಾರೆ.
ಚಿರು ನೆನೆದು ಕಣ್ಣೀರಿಟ್ಟ ಮೇಘನಾ, ತುಂಬಾ ದಿನಗಳ ನಂತರ ಮಾಧ್ಯಮದ ಮುಂದೆ ಬರ್ತಾ ಇದೀನಿ. ಹಳೆಯದ್ದನ್ನೆಲ್ಲ ನಾನು ನೆನಪು ಮಾಡೋದಿಲ್ಲ. ಇಂದು ನನ್ನ ಮಗನಿಗೆ ತೊಟ್ಟಿಲು ಶಾಸ್ತ್ರ. ಹೊಸ ಸಂತಸ ಮನೆ ಮಾಡಿದೆ. ನಾನು ಸ್ಟ್ರಾಂಗ್ ಇದೀನೋ- ಇಲ್ವೋ ಅನ್ನೋದು ನನಗೆ ಗೊತ್ತಿಲ್ಲ. ಕೆಲವು ಘಟನೆಗಳು ನಡೆದಾಗ ನಾನು ಸಂಪೂರ್ಣ ಬ್ಲಾಂಕ್ ಆಗಿ ಹೋದೆ ಎನ್ನುತ್ತಾ ಭಾವುಕರಾದರು.
ಚಿರು ಅಗಲಿಕೆ ನೋವು ಮರೆಯೋಕೆ ಅಸಾಧ್ಯ. ನನ್ನ ಮಗನನ್ನ ನೋಡಿದಾಗ ಚಿರು ಹೇಗೆ ನೋಡಿಕೊಳ್ತಾ ಇದ್ರು ಅನ್ನೋದು ನನಗೆ ಕಾಣುತ್ತೆ. ಚಿರು ಅಂದ್ರೆ ಸೆಲೆಬ್ರೇಷನ್. ಚಿರು ಅಂದ್ರೆ ನಗು ಮುಖ ಕಣ್ ಮುಂದೆ ಬರುತ್ತೆ. ಅವರ ಸೆಲೆಬ್ರೇಷನ್ ಅನ್ನು ನಾನು ಮುಂದುವರಿಸಬೇಕು. ನನ್ನ ಮನೆಯಲ್ಲಿ ಚಿರುಗೆ ಸಂಬಂಧಿಸಿದ ವಸ್ತು ಏನೇ ಇದ್ದರೂ ಸೆಲೆಬ್ರೇಷನ್ ಮಾಡ್ತೀವಿ ಎಂದು ಮೇಘನಾ ಹೇಳಿದರು.
ನನ್ನ ಮಗ ಹುಟ್ಟಿದಾಗ ಚಿರು ಫೋಟೋ ಮುಂದೆ ಮಗುವನ್ನು ಇಟ್ಟದ್ದು ನೋಡಿ ಖುಷಿಯಾಯ್ತು. ಇಂಥ ಪ್ರಯತ್ನ ಮಾಡಿದವರಿಗೆ ಧನ್ಯವಾದ ಅರ್ಪಿಸಿವೆ. ಈಗಲೂ ನನ್ನ ಪಿಲ್ಲರ್ ಆಫ್ ಸ್ಟ್ರೆಂತ್ ಅಂದ್ರೆ ನನ್ನ ತಾಯಿ-ತಂದೆ. ಐದು ತಿಂಗಳಿನಿಂದ ಮನೆಯಲ್ಲಿ ನನ್ನ ಸ್ನೇಹಿತರೂ ಇರುತ್ತಿದ್ದರು. ಮಾಧ್ಯಮ ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದರು.
ಕನ್ನಡ ಸಿನಿಮಾ ಇಂಡಸ್ಟ್ರಿ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದೆ. ಕೆಲ ಸಿನಿಮಾಗಳನ್ನ ಮಾಡ್ಬೇಕು ಅಂತ ನಾನು ಚಿರು ಮಾತನಾಡಿಕೊಂಡಿದ್ವಿ. ಅದು ಮುಂದುವರಿಯುತ್ತೆ. ಸದ್ಯ ನನ್ನ ಗಮನ ನನ್ನ ಮಗನ ಕಡೆ ಇದೆ ಎನ್ನುವ ಮೂಲಕ ಚಿತ್ರರಂಗದಲ್ಲಿ ಮುಂದುವರಿಯುವ ಸುಳಿವು ಕೊಟ್ಟರು.