

ಬೆಂಗಳೂರು: ದಿ. ಚಿರಂಜೀವಿ ಸರ್ಜಾ ಪತ್ನಿ ಮೇಘನಾಗೆ ಗಂಡು ಮಗು ಜನಿಸಿದ್ದು ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇದೆಲ್ಲಕ್ಕಿಂತ ವಿಶೇಷ ಏನೆಂದರೆ, 2017ರ ಅಕ್ಟೋಬರ್ 22ರಂದೇ ಮೇಘನಾ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅದೇ ಶುಭ ದಿನದಂದೇ ಮಗು ಜನಿಸಿದೆ.
ಸದ್ಯ ಅಕ್ಷ ಆಸ್ಪತ್ರೆ ಬಳಿ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕುಟುಂಬಸ್ಥರು ಬೀಡು ಬಿಟ್ಟಿದ್ದು, ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಜೂ. ಚಿರು ಆಗಮನ ಎಂದು ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಬೆಳಗ್ಗೆ 11.07 ನಿಮಿಷಕ್ಕೆ ಮಗುವಿನ ಜನನವಾಗಿದ್ದು, ಚಿಕ್ಕಪ್ಪ ಧ್ರುವ ಸರ್ಜಾ ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಸಹ ಸದ್ಯ ಹರಿದಾಡುತ್ತಿದೆ. ಇತ್ತ ನಾರ್ಮಲ್ ಹೆರಿಗೆಯಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.