

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಟಿ ಮೇಘಾ ಶೆಟ್ಟಿ, ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜತೆ ‘ತ್ರಿಬಲ್ ರೈಡಿಂಗ್’ ಸಿನಿಮಾ ಮೂಲಕ ಚಂದನವನಕ್ಕೂ ಪದಾರ್ಪಣೆ ಮಾಡಿದ್ದಾರೆ. ಇದರ ಜತೆಗೆ ಇದೀಗ ‘ನೋಡು ಶಿವ...’ ಎಂಬ ಆಲ್ಬಂ ಹಾಡಿಗೂ ಹೆಜ್ಜೆ ಹಾಕಲು ತಯಾರಿ ನಡೆಸಿದ್ದಾರೆ.
ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ಎಷ್ಟೋ ಜನ ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಇದೆಲ್ಲದರಿಂದ ಬೇಸತ್ತ ಯುವಕ ದೇವರೊಂದಿಗೆ ಸಂಭಾಷಣೆ ನಡೆಸುತ್ತಾನೆ. ತನ್ನ ಗೋಳನ್ನು ಹೇಳಿಕೊಳ್ಳುತ್ತಾನೆ. ಹಾಗೆ ಹೇಳಿಕೊಳ್ಳುವ ಪರಿಯನ್ನೇ ಹಾಡಿನ ರೂಪದಲ್ಲಿ ಸೆರೆಹಿಡಿಯಲಾಗುತ್ತಿದೆ. ಮೋನಿಕಾ ಕಲ್ಲೂರಿ ಆರ್ಟ್ಸ್ ಬ್ಯಾನರ್ನಲ್ಲಿ ಮೂಡಿಬರಲಿರುವ ಈ ಹಾಡಿಗೆ ಸುಮೀತ್ ಎಂ.ಕೆ ಸಾಹಿತ್ಯ ಬರೆದು, ನಿರ್ದೇಶನವನ್ನೂ ಮಾಡಲಿದ್ದಾರೆ. ಹಾಡಿನಲ್ಲಿ ಗ್ಲಾಮರಸ್ ಅವತಾರದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡರೆ, ಅವರಿಗೆ ಸುಮೀತ್ ಸಾಥ್ ನೀಡಲಿದ್ದಾರೆ.
ಇನ್ನು ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿಗೆ ಧ್ವನಿ ನೀಡಿದ್ದಾರೆ. ವಿಶೇಷ ಪಾತ್ರದಲ್ಲಿ ಹಾಡಿನಲ್ಲಿ ಚಂದನ್ ಸಹ ಇರಲಿದ್ದಾರೆ. ಈ ಹಾಡಿನ ಬಗ್ಗೆ ಹೇಳಿಕೊಳ್ಳುವ ಮೇಘಾ, ‘ಕಿರುತೆರೆ, ಸಿನಿಮಾ ಬಳಿಕ ಇದೀಗ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಡಾನ್ಸ್ ಬಗ್ಗೆ ಮೊದಲಿಂದಲೂ ಆಸಕ್ತಿ ಇದೆ. ಸಮಯ ಸಿಕ್ಕಾಗಲೆಲ್ಲ ಹೆಜ್ಜೆ ಹಾಕುತ್ತಿದ್ದೆ. ಇದೀಗ ಆಲ್ಬಂ ಹಾಡೇ ಸಿಕ್ಕಿದೆ’ ಎಂಬುದು ಅವರ ಮಾತು. ಸರಿಸುಮಾರು ಮೂವತ್ತು ಲಕ್ಷ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡಿನಲ್ಲಿ 60 ನುರಿತ ಡಾನ್ಸರ್ಗಳು ಇರಲಿದ್ದು, ಎಎಂಸಿ ಕಾಲೇಜು ಕ್ಯಾಂಪಸ್ನಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ಕೊನೇ ವಾರದಲ್ಲಿ ಆನಂದ್ ಆಡಿಯೋದಲ್ಲಿ ಹಾಡನ್ನು ಬಿಡುಗಡೆ ಮಾಡುವುದು ತಂಡದ ಪ್ಲ್ಯಾನ್.