ಆಂಧ್ರ ಪ್ರದೇಶ: ಸದ್ಯ, ದೇಶಾದ್ಯಂತ ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ಬೆಲೆ ಕಡಿತ ಎಂಬ ವಿಚಾರದ ಬಗ್ಗೆಯೇ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ತೆಲುಗು ಸಿನಿಮಾ ನಟರು ಜಗನ್ ಮೋಹನ್ ರೆಡ್ಡಿಯ ಸರ್ಕಾರದ ವಿರುದ್ಧ ಹಗುರವಾದ ಮಾತುಗಳನ್ನಾಡುವುದು, ನಂತರ ಅದಕ್ಕೆ ಜಗನ್ ಸರ್ಕಾರದ ಸಚಿವರು ಟಾಂಗ್ ಕೊಡುವುದು, ಈ ಎಲ್ಲವನ್ನೂ ನೋಡ್ತಿದೀವಿ. ಆದರೆ, ಇಂದು ಸರ್ಕಾರ ಮತ್ತು ಸಿನಿರಂಗ ಒಂದೇ ಜಾಗದಲ್ಲಿ ಕಾಣಿಸಿಕೊಂಡಿದೆ. ಹೌದು, ಆಂಧ್ರದ ಸಿಎಂ ಜಗನ್ ಅವರನ್ನು ತೆಲುಗು ಸಿನಿರಂಗದ ಮುಖ್ಯಸ್ಥರಲ್ಲಿ ಒಬ್ಬರಾದ ಮೆಗಾ ಸ್ಟಾರ್ ನಟ ಚಿರಂಜೀವಿ ಭೇಟಿಯಾಗಿದ್ದರು. ಹೌದು, ನಟ ಚಿರಂಜೀವಿ ಅವರನ್ನು ಸ್ವತಃ ಸಿಎಂ ಜಗನ್ ಮೋಹನ್ ರೆಡ್ಡಿ ಅವರೇ ಊಟಕ್ಕೆ ಆಹ್ವಾನಿಸಿದರು. ಹಾಗಾಗಿ, ಚಿರಂಜೀವಿ ಅವರು ಇಂದು ಮಧ್ಯಾಹ್ನ ಅಮರಾವತಿಯ ತಾಡೆಪಲ್ಲಿಯಲ್ಲಿರುವ ಜಗನ್ ನಿವಾಸಕ್ಕೆ ಭೇಟಿ ನೀಡಿದ್ದರು.