ಹೊಸಬರ ‘ಮಾತೊಂದ ಹೇಳುವೆ’: ಧಾರವಾಡ ಮೂಲದ ಮಯೂರ್ ನಿರ್ದೇಶನದ ಮೊದಲ ಸಿನಿಮಾ

FotoJet
Published on

ಬೆಂಗಳೂರು: ಆರ್‌ಜೆ ರೋಹಿತ್, ಆರ್‌ಜೆ ರಾಜೇಶ್, ಡಾನಿಶ್ ಸೇಠ್, ಪ್ರದೀಪ, ಪೃಥ್ವಿ ಸೇರಿ ಹಲವು ರೇಡಿಯೋ ಜಾಕಿಗಳು ಚಿತ್ರರಂಗದಲ್ಲೂ ನಟನೆ, ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿದ್ದಾರೆ. ಇದೀಗ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಆರ್‌ಜೆ ಆಗಿ ಕೆಲಸ ಮಾಡುತ್ತಿದ್ದ ಮಯೂರ್ ಕಡಿ. ಈ ಸಾಲಿಗೆ ಹೊಸ ಸೇರ್ಪಡೆ. ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿ, ಮುಂಬೈನ ಅನುಪಮ್ ಖೇರ್ ಅಕಾಡೆಮಿಯಲ್ಲಿ ನಟನೆ, ನಿರ್ದೇಶನದ ತರಬೇತಿ ಪಡೆದು ಇದೀಗ ‘ಮಾತೊಂದ ಹೇಳುವೆ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿ, ನಾಯಕನಾಗಿಯೂ ನಟಿಸಿದ್ದಾರೆ ಮಯೂರ್. ‘ಇದು ಹುಬ್ಬಳ್ಳಿ ಹುಡುಗ ಮತ್ತು ಮೈಸೂರಿನ ಹುಡುಗಿ ನಡುವಿನ ಲವ್‌ಸ್ಟೋರಿ. ನಾಯಕ ಆರ್‌ಜೆಯಾಗಿರುತ್ತಾನೆ. ಜನರ ನೋವು-ನಲಿವು ಕುರಿತು ಶೋ ಮಾಡುವಾಗ ನಾಯಕಿ ಸಂಪರ್ಕಕ್ಕೆ ಬರುತ್ತಾಳೆ. ಆಗ ಇಬ್ಬರ ನಡುವೆ ಕಥೆ ಆರಂಭವಾಗುತ್ತದೆ. ಪ್ರೀತಿ ಆರಂಭವಾಗುವುದಕ್ಕೂ ಮುನ್ನ ವಿಶೇಷ ಸನ್ನಿವೇಶಗಳು ಕಥೆಯನ್ನು ಆಸಕ್ತಿಕರವಾಗಿಸುತ್ತವೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ. ಮೈಸೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಮೈಸೂರಿನ ಅಪೂರ್ವ ಆರಾಧ್ಯ ನಾಯಕಿಯಾಗಿದ್ದಾರೆ. ಆ ಭಾಗದ ಪಾತ್ರಕ್ಕೆ ಇವರೇ ಸೂಕ್ತ ಎಂದು ನಿರ್ಧರಿಸಿ ಆಯ್ಕೆ ಮಾಡಿದೆವು. ಇನ್ನು ಗಿರೀಶ್ ಶಿವಣ್ಣ, ಪಿ.ಡಿ.ಸತೀಶ್, ಚೇತನ್ ಮರಂಬೀಡ್, ಕಾರ್ತಿಕ್ ಪತ್ತಾರ್ ಕಲಾ ಬಳಗದಲ್ಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ. ಹಾಗೇ ಮೊದಲ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವ ಅವರು, ‘ಕಲಾವಿದರಿಗೆ 15 ದಿನಗಳ ಕಾಲ ವರ್ಕ್‌ಶಾಪ್ ಮಾಡಿದೆವು. ನಾಲ್ಕೈದು ಟೈಟಲ್‌ಗಳಲ್ಲಿ ‘ಮಾತೊಂದ ಹೇಳುವೆ’ ಶೀರ್ಷಿಕೆ ಕಥೆಗೆ ಸೂಕ್ತ ಅಂತನ್ನಿಸಿ ೈನಲ್ ಮಾಡಿದೆವು’ ಎಂದು ಹೇಳಿಕೊಳ್ಳುತ್ತಾರೆ ಮಯೂರ್. ಚಿತ್ರದಲ್ಲಿ ಆರು ಹಾಡುಗಳಿದ್ದು ಉಲ್ಲಾಸ್ ಕುಲಕರ್ಣಿ ಸಂಗೀತದಲ್ಲಿ ಮೂಡಿಬಂದಿವೆ. ಎಲ್ಲ ಅಂದುಕೊಂಡಂತಾದರೆ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net