

ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಂ ಅವರ ಜನಪ್ರಿಯ ಧಾರಾವಾಹಿಗಳಲ್ಲಿ ‘ಮಾಯಾಮೃಗ’ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ ಇಂದಿಗೂ ಮನೆಮಾತಾಗಿದೆ. ಈಗ ಈ ಧಾರಾವಾಹಿಯು ವೆಬ್ಸೀರೀಸ್ ಆಗಿ ಪ್ರಸಾರವಾಗಲಿದೆ.
ಯೂಟ್ಯೂಬ್ನ ಭೂಮಿಕಾ ಟಾಕೀಸ್ ಚಾನಲ್ನಲ್ಲಿ ‘ಮಾಯಾಮೃಗ’ ಧಾರಾವಾಹಿಯು ಜೂನ್ 4ರಿಂದ ಸ್ಟ್ರೀಮ್ ಆಲಿದೆ. ಮೂಲ ಧಾರಾವಾಹಿಯು 430 ಎಪಿಸೋಡುಗಳಷ್ಟಿತ್ತು. ಆದರೆ, ಈಗಿನ ಪರಿಸ್ಥಿತಿ ಮತ್ತು ವೀಕ್ಷಕರ ಅಭಿರುಚಿಗೆ ತಕ್ಕಂತೆ ಒಂದಿಷ್ಟು ವಿಷಯಗಳನ್ನು ಟ್ರಿಮ್ ಮಾಡಲಾಗಿದ್ದು, ಒಟ್ಟು 360 ಕಂತುಗಳಲ್ಲಿ ಈ ವೆಬ್ಸೀರೀಸ್ ಪ್ರಸಾರವಾಗಲಿದೆ. ವಾರಕ್ಕೆ ಐದರಿಂದ 10 ಎಪಿಸೋಡುಗಳನ್ನು ಅಪ್ಲೋಡ್ ಮಾಡುವುದಾಗಿ ಟಿ.ಎನ್. ಸೀತಾರಾಂ ಹೇಳುತ್ತಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಸೀತಾರಾಂ, ‘ಒಟ್ಟು 360 ಎಪಿಸೋಡುಗಳ ವೆಬ್ಸೀರೀಸ್ ಆಗಿ ‘ಮಾಯಾಮೃಗ’ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಪ್ರತಿಯೊಂದು ಕಂತು 22 ನಿಮಿಷಗಳ ಅವಧಿಯದ್ದಾಗಿರುತ್ತದೆ. ಇದಲ್ಲದೆ, ಆಫ್-ಸ್ಕ್ರೀನ್ ದೃಶ್ಯಗಳು ಸಹ ಇರುತ್ತವೆ’ ಎಂದು ಹೇಳುತ್ತಾರೆ. ಮಧ್ಯಮ ವರ್ಗದ ಕುಟುಂಬಗಳ ಸುತ್ತ ಸುತ್ತುವ ಈ ಧಾರಾವಾಹಿಯಲ್ಲಿ ದತ್ತಣ್ಣ, ಎಂ.ಡಿ. ಪಲ್ಲವಿ, ಲಕ್ಷ್ಮೀ ಚಂದ್ರಶೇಖರ್, ಸೇತೂರಾಂ, ಮಾಳವಿಕಾ, ಅವಿನಾಶ್, ಮುಖ್ಯಮಂತ್ರಿ ಚಂದ್ರು ಮುಂತಾದವರು ಅಭಿನಯಿಸಿದ್ದರು. ಈ ಧಾರಾವಾಹಿಯನ್ನು ಟಿ.ಎನ್. ಸೀತಾರಾ, ಪಿ. ಶೇಷಾದ್ರಿ ಮತ್ತು ನಾಗೇಂದ್ರ ಷಾ ಜತೆಯಾಗಿ ನಿರ್ದೇಶಿಸಿದ್ದರು.