ಕಣ್ಣು ಒದ್ದೆಯಾಗುವಷ್ಟು ಎಮೋಶನ್ಸ್, ಹೊಟ್ಟೆ ಹುಣ್ಣಾಗುವಷ್ಟು ನಗು; ಮಾಯಾಬಜಾರ್ ಇಂದು ತೆರೆಗೆ

CHAITRA
Published on

ಪುನೀತ್ ರಾಜ್​ಕುಮಾರ್ ನಿರ್ವಿುಸಿರುವ ‘ಮಾಯಾಬಜಾರ್’ ಇಂದು (ಫೆ. 28) ತೆರೆಗೆ ಬರುತ್ತಿದ್ದು, ಇದರಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ, ವಸಿಷ್ಠ ಸಿಂಹ, ಚೈತ್ರಾ ರಾವ್ ಸಿನಿವಾಣಿ ಜತೆ ತಮ್ಮ ಪಾತ್ರ ಹಾಗೂ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ತಮ್ಮ ಮೊದಲ ಕನಸಿನ ಕೂಸಿನ ಬಗ್ಗೆ ಮಾತುಗಳನ್ನಾಡಿದ್ದಾರೆ.

‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಎಲ್ಲರನ್ನೂ ನಗಿಸಿದ್ದ ರಾಜ್ ಶೆಟ್ಟಿ, ಇದುವರೆಗೂ ಕೇಳಿರುವ ಕಥೆಗಳಲ್ಲಿ ಮತ್ತು ನಟಿಸಿರುವ ಸಿನಿಮಾಗಳಲ್ಲಿ ‘ಮಾಯಾಬಜಾರ್’ ಒಂದು ಕಂಪ್ಲೀಟ್ ಎಂಟರ್​ಟೇನಿಂಗ್ ಚಿತ್ರವಂತೆ. ಈ ಮಾತನ್ನು ಅವರೇ ಹೇಳಿದ್ದು, ಈ ಚಿತ್ರದ ಮೇಲೆ ನನಗೆ ಅತೀವ ನಂಬಿಕೆ ಇದೆ. ಜನ ಖಂಡಿತ ಇಷ್ಟಪಡುತ್ತಾರೆ ಎನ್ನುತ್ತಾರವರು.

ಒಮ್ಮೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಕರೆ ಮಾಡಿದ್ದರು. ನಾನು ಗೊತ್ತಿಲ್ಲದ ನಂಬರ್​ಗಳಿಂದ ಕರೆ ಬಂದರೆ ಸ್ವೀಕರಿಸುವುದಿಲ್ಲ. ಕರೆ ಮಾಡಿದ ಬಳಿಕ ಅವರು ‘ನಾನು ರಾಧಾಕೃಷ್ಣ ರೆಡ್ಡಿ ಅಂತ, ಪುನೀತ್​ರಾಜ್​ಕುಮಾರ್ ಬ್ಯಾನರ್​ನಲ್ಲಿ ಸಿನಿಮಾ ಮಾಡುತ್ತಿದ್ದೇನೆ, ನಿಮ್ಮ ಜತೆ ಮಾತನಾಡಬೇಕಿತ್ತು’ ಎಂದು ಮೆಸೇಜ್ ಮಾಡಿದ್ದರು. ನಾನು ಯಾರೋ ಸ್ನೇಹಿತರು ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡು, ಆ ನಂಬರ್​ಗೆ ಕಾಲ್ ಮಾಡಿದಾಗ ಅದು ನಿಜ ಆಗಿತ್ತು. ನಂತರ ಬೆಂಗಳೂರಿಗೆ ಬಂದು ಕಥೆ ಕೇಳುತ್ತೇನೆ ಎಂದಿದ್ದೆ. ಬರುವ ದಾರಿಯಲ್ಲಿ ಈ ಸ್ಕ್ರಿಪ್ಟ್ ಚೆನ್ನಾಗಿರಲಿ ಎಂದು ಕೈ ಮುಗಿದು ದೇವರ ಬಳಿ ಕೇಳಿಕೊಂಡಿದ್ದೆ. ಕಥೆ ಕೇಳಿದ ಮೇಲೆ ನಾನು ಕೈ ಮುಗಿದಿದ್ದು ಸಾರ್ಥಕವಾಯಿತು ಎಂದುಕೊಂಡೆ.

ಸ್ಲಮ್ ಯುವಕನ ಪಾತ್ರ: ಬೆಂಗಳೂರಿನ ಸ್ಲಮ್ ಒಂದರಲ್ಲಿ ವಾಸವಾಗಿರುವ ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದೇನೆ. ಏನಾದರೂ ಮಾಡಿ ಬೆಳೆಯಬೇಕು ಎಂಬ ಉದ್ದೇಶದಲ್ಲಿ ಕಷ್ಟಪಡುತ್ತಿರುತ್ತೇನೆ. ಅಂಥವನ ಜೀವನದಲ್ಲಿ ನೋಟ್ ಬ್ಯಾನ್ ಆದಾಗ ಏನೇನು ಆಗುತ್ತದೆ ಎಂಬುದೇ ನನ್ನ ಪಾತ್ರ. ನಾನು, ಅಚ್ಯುತ್​ಕುಮಾರ್, ವಸಿಷ್ಠ ಸಿಂಹ ಮೂವರಿಗೂ ಸಿನಿಮಾದಲ್ಲಿ ಬಹಳ ಹಣದ ಅವಶ್ಯಕತೆ ಇರುತ್ತದೆ.

ಸರಳ ವ್ಯಕ್ತಿತ್ವದ ಸಾಕಾರ ಮೂರ್ತಿ: ನಾನು ರಾಜ್​ಕುಮಾರ್ ಅವರ ಬಗ್ಗೆ ಕೇಳಿದ್ದೆ, ಓದಿದ್ದೆ. ಆದರೆ ಅವರ ಮಗ ಪುನೀತ್ ಅವರ ಬ್ಯಾನರ್​ನಲ್ಲಿ ಕೆಲಸ ಮಾಡಿದಾಗ ನನಗೆ ಆದ ಅನುಭವಗಳು ಅದ್ಭುತ. ನಾನು ಕಥೆ ಕೇಳುವಾಗ ನಿರ್ದೇಶಕರಿಗೆ ಪುನೀತ್ 3 ಬಾರಿ ಕರೆ ಮಾಡಿದ್ದರು, ಕೇಳಿ ಮುಗಿದ ಮೇಲೆ ನನ್ನ ಬಳಿ ಮಾತನಾಡಿ ಕಥೆ ಚೆನ್ನಾಗಿದೆಯಾ, ನಿಮಗೆ ಇಷ್ಟವಾಯಿತಾ ಎಂದು ಕೇಳಿದರು. ನೀವು ಆ ಸಿನಿಮಾದಲ್ಲಿ ನಟಿಸಬೇಕು ಎಂದೂ ಸಹ ಕೇಳಿದರು.

ಸಿನಿಮಾ ಮೇಲೆ ಅವರಿಗೆ ಇರುವ ಪ್ಯಾಷನ್, ಪ್ರೀತಿಯನ್ನು ನಾನು ಬಹಳ ಸಲ ನೋಡಿದೆ. ಅವರ ಪಕ್ಕ ಕುಳಿತರೆ ಯಾವುದೋ ಸ್ಟಾರ್ ಜತೆ ಕುಳಿತಿದ್ದೇನೆ ಎಂಬ ಫೀಲ್ ಬರದಂತೆ ಇರುತ್ತಾರೆ. ಸಿನಿಮಾ ಕೆಲ ಕಾರಣಗಳಿಗೆ ತಡವಾಯಿತು. ಆದರೆ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ, ಚಿತ್ರ ಚೆನ್ನಾಗಿ ಬರುತ್ತಿದೆ, ನನಗೆ ಅಷ್ಟು ಸಾಕು ಎಂದು ಹೇಳಿದ್ದರು.

ಮೊದಲ ಫ್ರೇಮ್ಂದ ಕಡೆ ಫ್ರೇಮ್ರೆಗೂ ನಗು: ‘ಮಾಯಾಬಜಾರ್’ ಮೊದಲ ಫ್ರೇಮ್ಂದ ಕೊನೆಯ ಫ್ರೇಮ್ರೆಗೂ ನಗಿಸುತ್ತದೆ. ನಗಿಸುತ್ತಲೇ ಸಂಬಂಧಗಳ ಬಗ್ಗೆ ಹೇಳುತ್ತ ಹೋಗುತ್ತದೆ. ಪ್ರೇಕ್ಷಕ ಖುಷಿಯಿಂದ ಸಿನಿಮಾ ನೋಡಿಕೊಂಡು ಹೊರಬರುತ್ತಾನೆ ಎಂದು ತಮ್ಮ ಮಾತು ಮುಗಿಸುತ್ತಾರೆ ರಾಜ್ ಬಿ. ಶೆಟ್ಟಿ.

ಸಿನಿಮಾದಲ್ಲಿ ನಾನು ಮುಗ್ಧೆ

‘ಮಾಯಾಬಜಾರ್’ನಲ್ಲಿ ವಸಿಷ್ಠ ಅವರ ಜೋಡಿಯಾಗಿ ‘ಜೋಡಿ ಹಕ್ಕಿ’ ಸೀರಿಯಲ್ ಖ್ಯಾತಿಯ ಚೈತ್ರಾ ರಾವ್ ನಟಿಸಿದ್ದು, ಈ ಚಿತ್ರದಲ್ಲಿ ಇರುವ ಎಲ್ಲ ಪಾತ್ರಗಳಲ್ಲಿ ಅವರದ್ದು ಮುಗ್ಧೆಯ ಪಾತ್ರ. ಸಹನಾ ಎಂಬ ಕಾಲೇಜು ವಿದ್ಯಾರ್ಥಿನಿಯಾಗಿ ಅವರು ನಟಿಸಿದ್ದಾರಂತೆ. ‘ಪ್ರತಿಯೊಬ್ಬರ ಬದುಕಿನಲ್ಲಿಯೂ ತಿರುವುಗಳು ಇರುತ್ತವೆ. ಹಾಗೆ ಸಹನಾಳ ಬದುಕಲ್ಲಿಯೂ ಒಂದಷ್ಟು ತಿರುವುಗಳು ಬಂದಾಗ ಏನಾಗುತ್ತದೆ ಮತ್ತು ಅವಳು ಅವುಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದೇ ಚಿತ್ರದ ಕಥೆ. ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ಸಿನಿಮಾದಲ್ಲಿಯೇ ನೋಡಬೇಕು ಎನ್ನುತ್ತಾರೆ ಚೈತ್ರಾ.

ಕಂಠೀರವ ಸ್ಟುಡಿಯೋದಲ್ಲಿ ಒಮ್ಮೆ ಪುನೀತ್ ಅವರ ಜತೆ ಫೋಟೋ ತೆಗೆಸಿಕೊಂಡಿದ್ದೆ. ಈಗ ಅವರದ್ದೇ ಬ್ಯಾನರ್​ನಲ್ಲಿ ನಟಿಸಿದ್ದೇನೆ, ಅವರ ಪಕ್ಕ ಕುಳಿತು ಮಾಧ್ಯಮಗಳ ಜತೆ ಮಾತನಾಡಿದ್ದೇನೆ. ಜತೆಗೆ ಇದು ಕನಸೋ ನನಸೋ ಎಂದು ಈಗಲೂ ಅದರ ಬಗ್ಗೆ ಯೋಚಿಸುತ್ತಿರುತ್ತೇನೆ. ಇನ್ನು ಸೆಟ್​ನಲ್ಲಿ ನನಗೆ ನಟಿಸುತ್ತಿದ್ದೇನೆ ಎಂದು ಅನಿಸಿರಲಿಲ್ಲ. ಎಲ್ಲರೂ ಫ್ಯಾಮಿಲಿ ರೀತಿ ಇದ್ದೆವು. ವಸಿಷ್ಠ ಸಿಂಹ ಅವರ ಜತೆ ನಟಿಸಿದ್ದು ಒಳ್ಳೆಯ ಅನುಭವ. ಒಂದು ಸೀನ್​ನಲ್ಲಿ ನನಗೆ ಎಷ್ಟೇ ಕಷ್ಟಪಟ್ಟರೂ ಎಕ್ಸ್​ಪ್ರೆಶನ್ ಬರುತ್ತಿರಲಿಲ್ಲ. ಆಗ ವಸಿಷ್ಠ ಸಿಂಹ ಅವರು ಬಂದು ನನಗೆ ಹೇಳಿಕೊಟ್ಟರು. ಅದು ನನಗೆ ಈ ಸಿನಿಮಾದಲ್ಲಿ ಮರೆಯಲಾಗದ ಘಟನೆ ಎಂದು ಹೇಳುತ್ತಾರವರು.

ಇಲ್ಯಾರೂ ಹೀರೋ ಅಲ್ಲ, ಯಾರೂ ವಿಲನ್ ಅಲ್ಲ

ಪುನೀತ್ ರಾಜ್​ಕುಮಾರ್ ಬ್ಯಾನರ್​ನಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಖುಷಿಯಲ್ಲಿರುವ ರಾಧಾಕೃಷ್ಣ ರೆಡ್ಡಿ ಅವರ ಪ್ರಕಾರ ‘ಮಾಯಾ ಬಜಾರ್’ನಲ್ಲಿ ಯಾರೂ ಹೀರೋ ಅಲ್ಲ, ಯಾರೂ ವಿಲನ್ ಅಲ್ಲ. ಸಂದರ್ಭ ಪರಿಸ್ಥಿತಿ ಅವರನ್ನು ಕೆಲವೊಮ್ಮೆ ಹೀರೋ ಮಾಡಿದರೆ, ಇನ್ನು ಕೆಲವೊಮ್ಮೆ ವಿಲನ್ ಮಾಡುತ್ತದಂತೆ. ಇಂಥ ಕಥೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರಂತೆ ಅವರು. ‘ಜನ ಸಿನಿಮಾಗೆ ಬರುವುದು ಮನರಂಜನೆಗಾಗಿ, ನಾನೂ ಅದೇ ಮನಸ್ಥಿತಿಯವನು.

ನನ್ನ ಮೊದಲ ಚಿತ್ರ ‘ಮಾಯಾಬಜಾರ್’ ಕೂಡ ಮನರಂಜನೆಯನ್ನಷ್ಟೇ ನೀಡುವ ಸಿನಿಮಾ. ಆ ವಿಚಾರದಲ್ಲಿ ಇದು 100% ಎಂಟರ್​ಟೇನ್​ವೆುಂಟ್ ಪ್ಯಾಕೇಜ್ ಸಿನಿಮಾ. ಸ್ಕ್ರೀನ್ ಪ್ಲೇನಲ್ಲಿ ಕೊಂಚ ಪ್ರಯೋಗ ಮಾಡಿದ್ದೇವೆ. ನಟಿಸಿರುವ ಎಲ್ಲರೂ ಖ್ಯಾತನಾಮರೇ. ಇಲ್ಲಿ ಅವರ್ಯಾರು ಹೀರೋ ಅಲ್ಲ, ಕಥೆ-ಚಿತ್ರಕಥೆಯಷ್ಟೇ ಹೀರೋ. ಪಾತ್ರಗಳ ಬಗ್ಗೆ ಈಗ ಹೆಚ್ಚು ಏನನ್ನೂ ಹೇಳಲು ಸಾಧ್ಯವಿಲ್ಲ. ಹೇಳಿದರೆ ಕಥೆಯನ್ನೇ ಹೇಳಿದಂತಾಗುತ್ತದೆ. ಪ್ರೇಕ್ಷಕ ಚಿತ್ರಮಂದಿರದೊಳಗೆ ಒಬ್ಬನೇ ಬಂದರೆ, ನಂತರ ನಾಲ್ಕು ಜನರನ್ನು ಆತನೇ ಕರೆದುಕೊಂಡು ಬರುತ್ತಾನೆ.

ಒಬ್ಬ ನಿರ್ದೇಶಕನಾಗಿ ಅಷ್ಟು ಭರವಸೆಯನ್ನು ಚಿತ್ರದ ಬಗ್ಗೆ ನಾನು ನೀಡಬಹುದು. ಸಿನಿಮಾ ಮಾಡುವುದೇ ದೊಡ್ಡ ಕನಸು, ಅಂಥದ್ದರಲ್ಲಿ ನನ್ನ ಮೊದಲ ಸಿನಿಮಾ ಪುನೀತ್​ರಾಜ್​ಕುಮಾರ್ ನಿರ್ಮಾಣ ಮಾಡುತ್ತಾರೆ ಎಂದರೆ ಅದರಂಥ ಖುಷಿ ಮತ್ತೊಂದಿಲ್ಲ. ಇದು ನನ್ನ ಬದುಕಿನ ಅದ್ಭುತ ಘಟನೆಗಳಲ್ಲಿ ಒಂದು ಎಂದು ಹೇಳುತ್ತಾರೆ ನಿರ್ದೇಶಕರು.

ಯಾವ ಪಾತ್ರವನ್ನು ಸುಖಾಸುಮ್ಮನೆ ತುರುಕಿಲ್ಲ

ನನ್ನ ವೃತ್ತಿ ಬದುಕಿನಲ್ಲಿ ಇಂಥ ಜಾನರ್​ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗು ಇದೆ. ಕಣ್ಣು ಒದ್ದೆಯಾಗುವಷ್ಟು ಎಮೋಷನ್ಸ್ ಇದೆ ಎನ್ನುವುದು ನಟ ವಸಿಷ್ಠ ಸಿಂಹ ಅವರ ಮಾತು. ‘ಹೊಸ ನಿರೂಪಣಾ ಶೈಲಿಯಲ್ಲಿರುವ ಸಿನಿಮಾ ಇದು. ಪ್ರತಿ ಪಾತ್ರವೂ ನಮ್ಮ ಸುತ್ತಲಿನ ಜನರಿಗೆ ಕನೆಕ್ಟ್ ಆಗುತ್ತದೆ. ಯಾವುದನ್ನೂ ವೈಭವೀಕರಿಸದೆ ಸರಳವಾದ ಕಥೆಯನ್ನು ನಿರ್ದೇಶಕರು ಹೇಳಿದ್ದಾರೆ.

ನೋಟ್ ಬ್ಯಾನ್ ಆದಂಥ ಸಮಯದಲ್ಲಿ ಜನರು ಪಟ್ಟ ಪಾಡನ್ನು ಈ ಚಿತ್ರದಲ್ಲಿ ಹೇಳಲು ಪ್ರಯತ್ನ ಪಟ್ಟಿದ್ದೇವೆ. ಇಷ್ಟು ದಿನಗಳಲ್ಲಿ ನಾನು ಬಹಳ ಎಂಜಾಯ್ ಮಾಡಿಕೊಂಡು ಮಾಡಿದಂಥ ಪಾತ್ರ’ಎಂದು ಹೇಳುತ್ತಾರವರು. ಈ ಚಿತ್ರದಲ್ಲಿ ಇರುವ ನಟರೆಲ್ಲರೂ ಅದ್ಭುತ ಕಲಾವಿದರು. ಎಲ್ಲ ಪಾತ್ರಕ್ಕೂ ಅದರದ್ದೇ ಆದಂತಹ ಮಹತ್ವವಿದೆ. ಯಾವ ಪಾತ್ರವನ್ನೂ ಸುಖಾಸುಮ್ಮನೆ ತುರುಕಿಲ್ಲ, ಕಥೆಯೇ ದೊಡ್ಡ ಹೀರೋ ಇಲ್ಲಿ.

ನಾನು ರಾಜಿ ಎನ್ನುವ ಬಡ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಬದುಕನ್ನು ಕಟ್ಟಿಕೊಳ್ಳುವ ಹಂತದಲ್ಲಿ ಪ್ರೀತಿಯಲ್ಲಿ ಬೀಳುತ್ತಾನೆ. ಜನ ಚಿತ್ರಮಂದಿರದೊಳಗೆ ಬಂದರೆ ಒಂದೊಳ್ಳೆಯ ಸಿನಿಮಾ ನೋಡಿದ ಫೀಲ್​ನಲ್ಲಿ ವಾಪಸ್ ಹೋಗುತ್ತಾರೆ ಎಂದು ಹೇಳುತ್ತಾರೆ ವಸಿಷ್ಠ ಸಿಂಹ. ಮಾಯಾಬಜಾರ್​ನಲ್ಲಿ ಸುಧಾರಾಣಿ, ಸಾಧುಕೋಕಿಲಾ, ಅಚ್ಯುತ್​ಕುಮಾರ್ ಸೇರಿ ಸಾಕಷ್ಟು ಮಂದಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್ ಕೂಡ ಒಂದು ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿರುವ ಎಲ್ಲ ಕ್ಯಾರೆಕ್ಟರ್​ಗಳು ಅದ್ಭುತವಾಗಿವೆ. ಪ್ರತಿಯೊಂದು ಪಾತ್ರವೂ ನೋಡುಗನನ್ನು ರಂಜಿಸುತ್ತದೆ. ಹಾಗಾಗಿ ಈ ಚಿತ್ರವನ್ನು ಜನ ಎಂಜಾಯ್ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. | ರಾಧಾಕೃಷ್ಣ ರೆಡ್ಡಿ ನಿರ್ದೇಶಕ | ಹರೀಶ್ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net