

ಬೆಂಗಳೂರು: ‘ವಿಕ್ರಾಂತ್ ರೋಣ’ ಚಿತ್ರದ ಬಳಿಕ ನಾಯಕನಟನಾಗಿ ಸುದೀಪ್ ನಟಿಸುತ್ತಿರುವ ಸಿನಿಮಾ ‘ಮ್ಯಾಕ್ಸ್’. ವಿಜಯ್ ಕಾರ್ತಿಕೇಯ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಡಿಸೆಂಬರ್ 25ರಂದು ‘ಮ್ಯಾಕ್ಸ್’ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಬುಧವಾರ ೋಷಿಸಿದೆ. ಎರಡೂವರೆ ವರ್ಷಗಳ ಬಳಿಕ ಸುದೀಪ್ ಅಭಿನಯದ ಚಿತ್ರವು ಬಿಡುಗಡೆಯಾಗುತ್ತಿದ್ದು, ಹೀಗಾಗಿ ‘ಮ್ಯಾಕ್ಸ್’ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದು ಸುದೀಪ್ ನಟನೆಯ 46ನೇ ಸಿನಿಮಾವಾಗಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಸುದೀಪ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಬಲಿಪುರಂ ಸೇರಿ ತಮಿಳುನಾಡಿನ ವಿವಿಧೆಡೆ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ವರಲಕ್ಷ್ಮೀ ಶರತ್‌ಕುಮಾರ್, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಕಲೈಪುಲಿ ಎಸ್. ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಬುಧವಾರ ರಿಲೀಸ್: ‘ಮ್ಯಾಕ್ಸ್’ ಸಿನಿಮಾವು ಡಿ.25ರಂದು ಬುಧವಾರ ರಿಲೀಸ್ ಆಗುತ್ತಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಬಹುತೇಕ ಶುಕ್ರವಾರ ಬಿಡುಗಡೆಯಾಗುತ್ತವೆ. ರಜೆ ಇದ್ದರೆ ಮಾತ್ರ ಗುರುವಾರ ಬಿಡುಗಡೆಯಾಗುತ್ತವೆ. ಇದು ಕೂಡ ವಿರಳ. ಆದರೆ, ಈ ಮಧ್ಯೆ, ಕನ್ನಡ ಸಿನಿಮಾಗಳು ಬುಧವಾರ ತೆರೆಕಂಡಿರುವುದು ತೀರಾ ಅಪರೂಪ. ಇದೀಗ ಈ ಸಾಲಿಗೆ ‘ಮ್ಯಾಕ್ಸ್’ ಸೇರಿದೆ. ಅದಕ್ಕೂ ಕಾರಣವಿದೆ. ಅಂದು ಕ್ರಿಸ್ಮಸ್ ರಜೆ. ಹೀಗಾಗಿ ಸರ್ಕಾರಿ ರಜೆ ಹಾಗೂ ಲಾಂಗ್ ವೀಕೆಂಡ್‌ನ್ನು ಸದುಪಯೋಗಿಸಿಕೊಳ್ಳುವ ಯೋಚನೆ ಚಿತ್ರತಂಡದ್ದು. ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ನಟನೆಯ ಹಿಂದಿ ಸಿನಿಮಾ ‘ಬೇಬಿ ಜಾನ್’ ಡಿ.25ಕ್ಕೆ ಬಿಡುಗಡೆಯಾಗುತ್ತಿದೆ.