

ಬೆಂಗಳೂರು: ಆರ್‌ಜೆ ರೋಹಿತ್, ಆರ್‌ಜೆ ರಾಜೇಶ್, ಡಾನಿಶ್ ಸೇಠ್, ಆರ್‌ಜೆ ಪ್ರದೀಪ, ಪೃಥ್ವಿ ಸೇರಿ ಹಲವು ರೇಡಿಯೋ ಜಾಕಿಗಳು ಚಿತ್ರರಂಗದಲ್ಲೂ ನಟನೆ, ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿದ್ದಾರೆ. ಇದೀಗ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಆರ್‌ಜೆ ಆಗಿ ಕೆಲಸ ಮಾಡುತ್ತಿದ್ದ ಮಯೂರ್ ಕಡಿ, ಈ ಸಾಲಿಗೆ ಹೊಸ ಸೇರ್ಪಡೆ. ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿ, ಮುಂಬೈನ ಅನುಪಮ್ ಖೇರ್ ಅಕಾಡೆಮಿಯಲ್ಲಿ ನಟನೆ, ನಿರ್ದೇಶನದ ತರಬೇತಿ ಪಡೆದು ಇದೀಗ ‘ಮಾತೊಂದ ಹೇಳುವೆ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿರುವ ಮಯೂರ್ ನಾಯಕನಾಗಿಯೂ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆಯೇ ಚಿತ್ರತಂಡ ಇತ್ತೀಚೆಗೆ ವಿಶೇಷ ವಿಡಿಯೋ ಮೂಲಕ ರಿಲೀಸ್ ದಿನಾಂಕ ೋಷಿಸಿದ್ದು, ಜೂ. 13ಕ್ಕೆ ಸಿನಿಮಾ ತೆರೆಗೆ ತರಲು ನಿರ್ಧರಿಸಿದೆ. ಮಯೂರ್ ಕಡಿ, ‘ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೋ ಜಾಕಿ ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ. ಇಬ್ಬರ ಭೇಟಿಯೇ ಕಥೆಯ ಜೀವಾಳ. ಇದೊಂದು ವಿಭಿನ್ನ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ’ ಎಂದು ಮಾಹಿತಿ ನೀಡುತ್ತಾರೆ. ಮಯೂರ್ ಕಡಿಗೆ ಮೈಸೂರು ಮೂಲದ ಅಪೂರ್ವ ಆರಾಧ್ಯ ಜೋಡಿಯಾಗಿದ್ದಾರೆ. ಗಿರೀಶ್ ಶಿವಣ್ಣ, ಪಿ.ಡಿ.ಸತೀಶ್ಚಂದ್ರ, ಪ್ರತೀಕ್ ರಡ್ಡೇರ್, ಚೇತನ್ ಮರಂಬೀಡ್, ಕಾರ್ತಿಕ್ ಪತ್ತಾರ್ ತಾರಾಗಣದಲ್ಲಿದ್ದಾರೆ. ಪಾರ್ವತೇಶ್ ಪೋಲ್ ಛಾಯಾಗ್ರಹಣ, ಉಲ್ಲಾಸ ಕುಲಕರ್ಣಿ ಸಂಗೀತ ನಿರ್ದೇಶನ, ಅಭಯ ಕಡಿ ಸಂಕಲನ ಚಿತ್ರಕ್ಕಿದೆ.