

ಬೆಂಗಳೂರು: ಯೋಗರಾಜ್ ಭಟ್, ಜಯತೀರ್ಥ, ಶಶಾಂಕ್ ಸೇರಿದಂತೆ ಐವರು ನಿರ್ದೇಶಕರು ಒಂದು ಆ್ಯಂಥಾಲಜಿ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. 'ಪೆಂಟಗನ್' ಎಂಬ ಐದು ವಿಭಿನ್ನ ಕಥೆಗಳಿರುವ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸುತ್ತಿದ್ದ ವಿಚಾರವೂ ಸುದ್ದಿಯಾಗಿತ್ತು. ಈ ಎರಡೂ ಚಿತ್ರಗಳು ಬಿಡುಗಡೆಯಾಗುವ ಮುನ್ನವೇ, ಕನ್ನಡದಲ್ಲಿ 'ಮೆಟಡೊರ್' ಎಂಬ ಇನ್ನೊಂದು ಆ್ಯಂಥಾಲಜಿ ಸಿನಿಮಾ ಸಿದ್ಧವಾಗಿದೆ. ಈ ಶುಕ್ರವಾರ (ಜೂನ್ 03) ಬಿಡುಗಡೆಯಾಗುತ್ತಿದೆ.
'ಮೆಟಡೊರ್' ನಿರ್ದೇಶಿಸಿರುವವರು ಸುದರ್ಶನ್ ಜಿ ಶೇಖರ್. ನಿರ್ಮಿಸಿದವರು ಕಿರಣ್ ಕುಮಾರ್. ಇದೊಂದು ಸಂಪೂರ್ಣ ಹೊಸಬರ ಚಿತ್ರ. ಕವಿತಾ ಗೌಡ ಒಂದು ಪ್ರಮೋಷನಲ್ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಬಿಟ್ಟರೆ, ಮಿಕ್ಕಂತೆ ಸಂಪೂರ್ಣ ಹೊಸಬರೇ ತುಂಬಿದ್ದಾರೆ.
'ಇದೊಂದು ಕರ್ಮದ ಕುರಿತಾದ ಚಿತ್ರ. ಐದು ಕಥೆಗಳಿವೆ. ಐದೂ ಬೇರೆಬೇರೆ ಜಾನರ್ನ ಕಥೆಗಳು. ಯಾವುದೇ ಪಾತ್ರಗಳು ಪರಸ್ಪರ ಸಂಧಿಸುವುದಿಲ್ಲ. ಆದರೆ, ಐದೂ ಕಥೆಗಳು ಇಂಟರ್ಕನೆಕ್ಟ್ ಆಗುತ್ತವೆ. ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಒಂದು ಮೆಟಡೊರ್ ಇಟ್ಟುಕೊಂಡು ಚಿತ್ರದ ಪ್ರಚಾರ ಮಾಡುತ್ತಿದ್ದೇವೆ' ಎನ್ನುತ್ತಾರೆ ಸುದರ್ಶನ್.
'ಮೆಟಡೊರ್'ನಲ್ಲಿ ಕಿರಣ್ ಕುಮಾರ್, ರವಿ ಮೈಸೂರು, ಶ್ರೇಯಾ, ವಿಠಲ್ ಭಟ್ ಮುಂತಾದವರು ನಟಿಸಿದ್ದಾರೆ.