ಸೆ.30ಕ್ಕಿಲ್ಲ ಮಾರ್ಟಿನ್: ಧ್ರುವ ಅಭಿನಯದ ಚಿತ್ರದ ಬಿಡುಗಡೆ ಮುಂದೂಡಿಕೆ

Martin
Published on

ಬೆಂಗಳೂರು: ಧ್ರುವ ಸರ್ಜಾ ಅಭಿಮಾನಿಗಳಿಗೆ ಒಂದು ನಿರಾಸೆಯ ಸುದ್ದಿ. ಸೆ. 30ಕ್ಕೆ ಧ್ರುವ ಅಭಿನಯದ ‘ಮಾರ್ಟಿನ್’ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣದಲ್ಲಿ ಒಂದಿಷ್ಟು ವಿಳಂಬವಾಗಿರುವುದರಿಂದ ಬಿಡುಗಡೆ ಮುಂದೂಡಲ್ಪಟ್ಟಿದೆ. ಹೊಸ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದಂತೆ.

ಎ.ಪಿ. ಅರ್ಜುನ್ ನಿರ್ದೇಶನದ ’ಮಾರ್ಟಿನ್’ ಕಳೆದ ವರ್ಷವೇ ಆರಂಭವಾಗಿತ್ತು. ಚಿತ್ರತಂಡದವರು ಕೆಲವು ತಿಂಗಳುಗಳ ಹಿಂದೆ ಕಾಶ್ಮೀರ, ಹೈದರಾಬಾದ್ ಮುಂತಾದ ಕಡೆ ಹಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿದಿದ್ದರು. ಅಂದುಕೊಂಡಂತೆ ಚಿತ್ರ ಮುಗಿಯಲಿದೆ ಎಂಬ ನಂಬಿಕೆಯಿಂದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡದವರು ಘೋಷಿಸಿದ್ದರು. ಆದರೆ, ಈಗ ಸ್ವಲ್ಪ ವಿಳಂಬವಾದ್ದರಿಂದ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ನಿರ್ವಪಕ ಉದಯ್ ಮೆಹ್ತಾ, ‘ಕಳೆದ ಎರಡು ತಿಂಗಳಿನಿಂದ ಸತತ ಮಳೆಯಾಗಿದ್ದರಿಂದ ಅಂದುಕೊಂಡಂತೆ ಚಿತ್ರೀಕರಣ ಮಾಡುವುದಕ್ಕೆ ಆಗಲಿಲ್ಲ. ಆ ನಂತರ ಧ್ರುವ ಅವರ ಅಜ್ಜಿ ಅನಾರೋಗ್ಯ ಮತ್ತು ನಿಧನದಿಂದ 30 ದಿನಗಳ ಕಾಲ ಚಿತ್ರೀಕರಣ ಮಾಡುವುದಕ್ಕೆ ಆಗಿರಲಿಲ್ಲ. ಇದೆಲ್ಲದರಿಂದ ಮೂರು ತಿಂಗಳು ಕಳೆದು ಹೋಯಿತು. ಈಗ ಚಿತ್ರೀಕರಣ ಮೊದಲು ಮುಗಿಸಬೇಕು. ಆ.5ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಬೆಂಗಳೂರು, ಮಂಗಳೂರು, ಹೈದರಾಬಾದ್, ಮುಂಬೈ ಮುಂತಾದ ಕಡೆ ಚಿತ್ರೀಕರಣ ಮಾಡಬೇಕಿದೆ. ಲೊಕೇಶನ್ ಶಿಫ್ಟ್ ಆಗುವುದರಿಂದ ಇಷ್ಟೇ ದಿನ ಚಿತ್ರೀಕರಣ ಎಂದು ಹೇಳುವುದು ಕಷ್ಟ. ಸೆ. 30ಕ್ಕೆ ಹೆಚ್ಚು ದಿನ ಉಳಿದಿಲ್ಲವಾದ್ದರಿಂದ, ಅಂದುಕೊಂಡಂತೆ ಆ ದಿನ ಬಿಡುಗಡೆ ಮಾಡುವುದಕ್ಕೆ ಸಾಧ್ಯವಿಲ್ಲ. ಚಿತ್ರೀಕರಣ ಪ್ರಾರಂಭವಾಗಿ ಸ್ಪಷ್ಟತೆ ಸಿಕ್ಕ ನಂತರ ಮುಂದಿನ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು’ ಎನ್ನುತ್ತಾರೆ. ‘ಮಾರ್ಟಿನ್’ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸುತ್ತಿದ್ದು, ಚಿಕ್ಕಣ್ಣ, ಸುಕೃತಾ ವಾಗ್ಲೆ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net