ಮಾರ್ಟಿನ್ ಆಗಮನಕ್ಕೆ ದಿನಾಂಕ ನಿಗದಿ; ಸೆ.30ಕ್ಕೆ 5 ಭಾಷೆಗಳಲ್ಲಿ ಧ್ರುವ ಸಿನಿಮಾ

Martin
Published on

ಬೆಂಗಳೂರು: ನಟ ಧ್ರುವ ಸರ್ಜಾ ಅವರ ವೇಗ ಹೆಚ್ಚಾಗಿದೆ. ಈ ಮೊದಲು ಒಂದು ಚಿತ್ರಕ್ಕೆ ಮೂರ್ನಾಲ್ಕು ವರ್ಷ ವ್ಯಯಿಸುತ್ತಿದ್ದ ಅವರೀಗ, ವರ್ಷಕ್ಕೊಂದು ಸಿನಿಮಾ ಕೊಡುವ ಲೆಕ್ಕಾಚಾರಕ್ಕೆ ಬಂದಂತೆ ಕಾಣುತ್ತಿದೆ. ಅಂದರೆ, ಕಳೆದ ವರ್ಷವಷ್ಟೇ ಸೆಟ್ಟೇರಿದ್ದ ‘ಮಾರ್ಟಿನ್’ ಚಿತ್ರವನ್ನು ಇದೇ ವರ್ಷ ಕಣ್ತುಂಬಿಕೊಳ್ಳಬಹುದಾಗಿದೆ. ಭಾನುವಾರ ರಾಮನವಮಿ ಪ್ರಯುಕ್ತ ‘ಮಾರ್ಟಿನ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿರುವ ತಂಡ, ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

‘ಅದ್ದೂರಿ’ ಸಿನಿಮಾ ಮೂಲಕ ಧ್ರುವ ಅವರನ್ನು ಚಂದನವನಕ್ಕೆ ಪರಿಚಯಿಸಿದ್ದ ನಿರ್ದೇಶಕ ಎ. ಪಿ. ಅರ್ಜುನ್, ದಶಕದ ಬಳಿಕ ಧ್ರುವ ಜತೆಗೆ ಮತ್ತೆ ಕೈ ಜೋಡಿಸಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರದ ಶೇ. 75ರಷ್ಟು ಚಿತ್ರೀಕರಣ ಮುಗಿಸಿಕೊಂಡಿರುವ ತಂಡ, ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಹಾಡಿನ ಮತ್ತು ಸಾಹಸ ದೃಶ್ಯಗಳ ಶೂಟಿಂಗ್ ಮಾಡಿಕೊಂಡಿತ್ತು. ಈ ಚಿತ್ರದಲ್ಲಿ ಧ್ರುವಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದು, ಉದಯ್ ಕೆ. ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net