ಹಾಡುಗಳ ಮೇಲೆ ಮರಳಿ ಮನಸಾಗಿದೆ: ಆಡಿಯೋ ಲಾಂಚ್ ಮಾಡಿದ ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ್

marali manasagide
Published on

ಬೆಂಗಳೂರು: ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕನಾಗಿ ನಟಿಸಿರುವ ಸಿನಿಮಾ ‘ಮರಳಿ ಮನಸಾಗಿದೆ’. ಇತ್ತೀಚೆಗಷ್ಟೆ ಮಾಜಿ ಡಿಸಿಎಂ, ಶಾಸಕ ಡಾ. ಅಶ್ವಥ್ ನಾರಾಯಣ್ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ನಿರ್ದೇಶಕ ನಾಗರಾಜ್ ಶಂಕರ್, ‘ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಇದು ಮೊದಲ ಸಿನಿಮಾ. ಇದೊಂದು ಸಂಗೀತ ಪ್ರಧಾನ ಚಿತ್ರ. ‘ಎದುರಿಗೆ ಬಂದರೆ ಹೃದಯಕೆ ತೊಂದರೆ’ ಎಂಬ ಮೊದಲ ಹಾಡನ್ನು ಇಂದು ರಿಲೀಸ್ ಮಾಡಿದ್ದೇವೆ. ವಿನು ಮನಸು ಸಂಗೀತ ಮತ್ತು ಸಂತೋಷ್ ವೆಂಕಿ ಧ್ವನಿಯಲ್ಲಿ ಸಾಂಗ್ ಮೂಡಿಬಂದಿದೆ. ಯುವಜನತೆಗೆ ಹತ್ತಿರವಾದ ಕಂಟೆಂಟ್ ಜತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ, ಮೆಡಿಕಲ್‌ಗೆ ಸಂಬಂಧಿಸಿದ ವಿಷಯವೂ ಚಿತ್ರದಲ್ಲಿದೆ. ಉಪೇಂದ್ರ ಸರ್ ಹೇಳುವಂತೆ ಇದು 2ಡಿ ಅರ್ಥಾತ್ ಎರಡು ಆಯಾಮಗಳಿರುವ ಕಥೆ. ಇಂಟರ್ವಲ್‌ಗೆ ಮುಂಚೆ ಒಂದು ಸಿನಿಮಾ, ಇಂಟರ್ವಲ್ ಬಳಿಕ ಮತ್ತೊಂದು ಸಿನಿಮಾ ಇರುತ್ತದೆ’ ಎಂದು ಮಾಹಿತಿ ನೀಡಿದರು. ಇದೇ ತಿಂಗಳ 23ರಂದು ಕಲಬುರ್ಗಿಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ನಾಯಕ ಅರ್ಜುನ್ ವೇದಾಂತ್, ‘ನಿರ್ದೇಶಕ ನಾಗರಾಜ್ ಮೊದಲ ಬಾರಿ ಕಥೆ ಹೇಳಿದಾಗಲೇ ನನಗೆ ಬಹಳ ಇಷ್ಟವಾಯಿತು. ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ನಮ್ಮ ಸಿನಿಮಾ ಪ್ರಚಾರವೂ ಆರಂಭವಾಗಿದೆ. ಕರ್ನಾಟಕದೆಲ್ಲೆಡೆ ಓಡಾಡಿ ಚಿತ್ರದ ಪ್ರಮೋಷನ್ ಮಾಡಲಿದ್ದೇವೆ. ಜನ ಕೊಟ್ಟ ದುಡ್ಡಿಗೆ ಬೇಸರವಾಗದ ಪರಿಶುದ್ಧ ಮನರಂಜನೆಯುಳ್ಳ ಚಿತ್ರವಿದು’ ಎಂದು ಹೇಳಿಕೊಂಡರು. ಅರ್ಜುನ್‌ಗೆ ಇಬ್ಬರು ನಾಯಕಿಯರಿದ್ದು ನಿರೀಕ್ಷಾ ಶೆಟ್ಟಿ ಮತ್ತು ಸ್ಮತಿ ವೆಂಕಟೇಶ್ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net