

ಬೆಂಗಳೂರು: ಏಪ್ರಿಲ್ 24, ಕನ್ನಡ ಸಿನಿಮಾ ಅಭಿಮಾನಿಗಳು ಸಂಭ್ರಮಪಡುವ ದಿನ. ಕಾರಣ, ಅಂದು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಪ್ರತಿಬಾರಿ ರಾಜ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಲಾಕ್ಡೌನ್ ಇದ್ದ ಕಾರಣ, ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.
ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಅವರ ಪುಣ್ಯಭೂಮಿಗೆ ಶುಕ್ರವಾರ ಬೆಳಿಗ್ಗೆ ಬೆರಳಣಿಕೆಯಷ್ಟು ಜನ ಭೇಟಿ ನೀಡಿ ಪೂಜೆ ಸಲ್ಲಿಸಿ ಬಂದರು. ರಾಘವೇಂದ್ರ ರಾಜಕುಮಾರ್, ಲಕ್ಷ್ಮೀ ಗೋವಿಂದರಾಜ್, ಎಸ್.ಎ. ಗೋವಿಂದರಾಜ್, ಬಾಲರಾಜ್ ಸೇರಿದಂತೆ ಡಾ. ರಾಜಕುಮಾರ್ ಕುಟುಂಬದ ಕೆಲವರು ಈ ಸಂದರ್ಭದಲ್ಲಿ ಹಾಜರಿದ್ದರು. ಶಿವರಾಜಕುಮಾರ್ ಕನಕಪುರದಲ್ಲಿರುವುದರಿಂದ, ಅಲ್ಲೇ ಡಾ. ರಾಜಕುಮಾರ್ ಅವರ ಫೋಟೋಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ್ದಾರೆ.
ಇನ್ನೊಂದು ಕಡೆ ಪುನೀತ್ ರಾಜಕುಮಾರ್, ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ವಿಭಿನ್ನವಾದ ಕಾಣಿಕೆ ನೀಡಿದ್ದಾರೆ. ಹಾಡಿನ ಮೂಲಕ ತಂದೆಯ ಜತೆಗಿನ ಬಾಂಧವ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ‘ಬಡವರ ಬಂಧು’ ಚಿತ್ರದ ‘ನಿನ್ನ ಕಂಗಳ ಬಿಸಿಯ ಹನಿಗಳು ...’ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ, ಹುಟ್ಟುಹಬ್ಬದ ಗಿಫ್ಟ್ ಕೊಟ್ಟಿದ್ದಾರೆ. ಒಂದು ನಿಮಿಷ, 36 ಸೆಕೆಂಡ್ನ ಇರುವ ಈ ವಿಡಿಯೋವನ್ನು ಪುನೀತ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಇನ್ನು, ಹಲವು ರಾಜಕೀಯ ಧುರೀಣರು, ಸಿನಿಮಾ ಸೆಲೆಬ್ರಿಟಿಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಆರೋಗ್ಯ ಸಚಿವ ಸುಧಾಕರ್, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನೀಲ್ ಜೋಷಿ, ಸುದೀಪ್, ದರ್ಶನ್, ರಚಿತಾ ರಾಮ್ ಗಣೇಶ್, ರಿಷಭ್ ಶೆಟ್ಟಿ, ಶರಣ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಶುಭ ಕೋರಿದ್ದಾರೆ.