ಮಾನ್ವಿತಾ ಹೊಸ ದಾರಿ; ‘ಮಳ್ಳಿ ಮೊದಲೈಂದಿ’ ಚಿತ್ರದ ಮೂಲಕ ತೆಲುಗಿಗೆ..

Manvitha
Published on

ಬೆಂಗಳೂರು: ಚಂದನವನದ ನಟಿ ಮಾನ್ವಿತಾ ಕಾಮತ್ ಕಳೆದ ಒಂದು ವರ್ಷದಿಂದ ಎಲ್ಲಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಚೆನ್ನೈನಲ್ಲಿ ಫಿಟ್​ನೆಸ್ ಟ್ರೇನಿಂಗ್ ಪಡೆಯುತ್ತಿದ್ದರು ಎಂಬ ಮಾತು ಕೇಳಿಬಂದಿತ್ತಾದರೂ ಅವರಿಂದ ಯಾವುದೇ ಅಧಿಕೃತ ಉತ್ತರ ಸಿಕ್ಕಿರಲಿಲ್ಲ. ಇದೀಗ ಸದ್ದಿಲ್ಲದೆ ಟಾಲಿವುಡ್​ನಲ್ಲಿ ಸಿನಿಮಾ ಅವಕಾಶವೊಂದನ್ನು ಪಡೆದುಕೊಂಡು, ತೆಲುಗಿಗೆ ಪದಾರ್ಪಣೆ ಮಾಡಿದ ನಾಯಕಿಯರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆ ಚಿತ್ರದ ಹೆಸರು ‘ಮಳ್ಳಿ ಮೊದಲೈಂದಿ’.

ಅಕ್ಕಿನೇನಿ ನಾಗಾರ್ಜುನ್ ಕುಟುಂಬದ ಸುಮಂತ್ ನಾಯಕನಾಗಿ ನಟಿಸಲಿರುವ ‘ಮಳ್ಳಿ ಮೊದಲೈಂದಿ’ ಚಿತ್ರದಲ್ಲಿ ಅವರಿಗೆ ಮಾನ್ವಿತಾ ಜೋಡಿಯಾಗಿದ್ದಾರೆ. ಶನಿವಾರ ಈ ಚಿತ್ರದ ಮುಹೂರ್ತ ನೆರವೇರಿದ್ದು, ಟಿ.ಜಿ .ಕೀರ್ತಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್- ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮಾಡದ ವಿಶೇಷ ಪಾತ್ರದಲ್ಲಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದು, ಇದೇ ತಿಂಗಳಾಂತ್ಯದಿಂದ ಶೂಟಿಂಗ್ ಸಹ ಶುರುವಾಗಿದೆ.

ಈ ಸಿನಿಮಾಬಗ್ಗೆ ಮಾಹಿತಿ ನೀಡುವ ಮಾನ್ವಿತಾ, ‘ಇಲ್ಲಿಯವರೆಗೂ ನಾನು ನಾನಲ್ಲದ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದೆ. ಈ ಸಿನಿಮಾದಲ್ಲಿ ಅಸಲಿಗೆ ನಾನು ಹೇಗಿದ್ದೇನೋ, ನನ್ನ ಸ್ವಭಾವ ಹೇಗಿದೆಯೋ ಅದೇ ರೀತಿಯ ಪಾತ್ರ ಸಿಕ್ಕಿದೆ. ಲುಕ್ ವಿಚಾರದಲ್ಲಿಯೂ ಹೊಸದನ್ನು ಪ್ರಯತ್ನಿಸುತ್ತಿದ್ದೇನೆ. ಇದೇ 27ರಿಂದ ಹೈದರಾಬಾದ್​ನಲ್ಲಿ ಶೂಟಿಂಗ್ ಶುರುವಾಗಲಿದೆ’ ಎನ್ನುತ್ತಾರೆ ಮಾನ್ವಿತಾ.

ಕಳೆದ ವರ್ಷ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಡ್’ ಚಿತ್ರದಲ್ಲಿ ಮಾನ್ವಿತಾ ನಟಿಸಿದ್ದು ಬಿಟ್ಟರೆ, ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ. ‘ಶಿವ 143’ ಚಿತ್ರ ಬಹುತೇಕ ಸಿದ್ಧವಾಗಿದ್ದು, ಕನ್ನಡ ಮತ್ತು ಮರಾಠಿಯಲ್ಲಿ ತಯಾರಾಗಿರುವ ‘ರಾಜಸ್ಥಾನ್ ಡೈರೀಸ್’ ಚಿತ್ರವೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೀಗ 2021ಕ್ಕೆ ‘ಮಳ್ಳಿ ಮೊದಲೈಂದಿ’ ಚಿತ್ರದ ಮೂಲಕ ಟಾಲಿವುಡ್​ಗೂ ಪದಾರ್ಪಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net