ಮಾನ್ವಿತಾ ಕನಸು ನನಸು, ಆನಿಮೇಷನ್ ಸಂಸ್ಥೆ ಪ್ರಾರಂಭ

ullasa 2
Published on

ಬೆಂಗಳೂರು: ಮಾನ್ವಿತಾ ಕಾಮತ್ ಅವರ ಬಹುದಿನಗಳ ಆಸಕ್ತಿಗೆ ಕೊನೆಗೂ ವೇದಿಕೆ ಸಿಕ್ಕಿದೆ. ‘ಮ್ಯಾನಿಕಿನ್’ ಹೆಸರಿನ ಆನಿಮೇಷನ್ ಸ್ಟೋರಿ ಬೋರ್ಡ್ ಸಂಸ್ಥೆಯನ್ನು ಗೆಳತಿ ಅಂಕಿತಾ ಕಿಣಿ ಜತೆ ಸೇರಿ ಶುರುಮಾಡಿದ್ದಾರೆ.

ಏನಿದು ಮ್ಯಾನಿಕಿನ್?: ‘ಚಿತ್ರೀಕರಣಕ್ಕೆ ಹೊರಡುವ ಮುನ್ನ ಆನಿಮೇಷನ್ ಸ್ಟೋರಿ ಬೋರ್ಡ್ ಮಾಡಿಕೊಳ್ಳಲೇಬೇಕು. ನೇರವಾಗಿ ಯಾವ ನಿರ್ದೇಶಕರೂ ಲೊಕೇಷನ್​ಗೆ ಹೋಗಿ ಶೂಟ್ ಮಾಡುವುದಿಲ್ಲ. ಆ ಸ್ಟೋರಿ ಬೋರ್ಡ್ ರೆಡಿಮಾಡುವುದು ನಿಜಕ್ಕೂ ದೊಡ್ಡ ಟಾಸ್ಕ್. ಅದನ್ನು ಸಿದ್ಧಪಡಿಸುವ ಕೆಲಸ ನಮ್ಮ ಮ್ಯಾನಿಕಿನ್ ಸಂಸ್ಥೆಯಿಂದಾಗಲಿದೆ’ ಎನ್ನುತ್ತಾರವರು. ಅಂದಹಾಗೆ, ಈ ವಿಚಾರ ಕಳೆದ ಎರಡು ವರ್ಷಗಳಿಂದ ಮಾನ್ವಿತಾ ತಲೆಯಲ್ಲಿ ಇತ್ತಾದರೂ, ಅದಕ್ಕೆ ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ಹೀಗಿರುವಾಗಲೇ ಇತ್ತೀಚೆಗಷ್ಟೇ ನೆದರ್​ಲೆಂಡ್​ನಲ್ಲಿ ಆನಿಮೇಟರ್ ಆಗಿ ಕೆಲಸ ಮಾಡುತ್ತಿರುವ ಸಂಬಂಧಿ ಅಂಕಿತಾ ಕಿಣಿ ಅವರ ಕೆಲಸ ನೋಡಿದ್ದೇ ತಡ, ಮ್ಯಾನಿಕಿನ್ ಸಂಸ್ಥೆ ಹುಟ್ಟಿಕೊಂಡಿದೆ. ಇಬ್ಬರ ಹೆಸರ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಸೇರಿಸಿ ಸಂಸ್ಥೆಯ ಹೆಸರಿಡಲಾಗಿದೆ. ಬಾಲಿವುಡ್​ನಲ್ಲಿ ‘ಘಜನಿ‘ ಸೇರಿ ಇತ್ತೀಚಿನ ‘ಸೂಪರ್ 30’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಖ್ಯಾತ ನಿರ್ವಪಕ ಮಧು ಮಂಟೆನಾ, ಮ್ಯಾನಿಕಿನ್ ಲೋಗೋ ಬಿಡುಗಡೆ ಮಾಡಿದ್ದಾರೆ.

ಮುಂಬೈನಲ್ಲಿ ಪ್ರಾಜೆಕ್ಟ್ ವಿಚಾರವಾಗಿ ನಿರ್ವಪಕ ಮಧು ಮಂಟೆನಾ ಅವರನ್ನು ಭೇಟಿಯಾಗಿದ್ದೆ. ಅವರಿಗೂ ಹೊಸ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ ಲೋಗೋ ಕಳುಹಿಸಿದ್ದೆ. ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ಮೇಕರ್​ಗಳು ನಮ್ಮ ಟಾರ್ಗೆಟ್ ಆಗಿರುವುದರಿಂದ ಅವರಿಂದ ಸಾಕಷ್ಟು ಮಂದಿಗೆ ನಾವು ತಲುಪಿದ್ದೇವೆ. ಕನ್ನಡ ಚಿತ್ರರಂಗದಿಂದಲೂ ಅಪಾರ ಬೆಂಬಲ ಸಿಕ್ಕಿದೆ. | ಮಾನ್ವಿತಾ ಕಾಮತ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net