

ಮಾಡೆಲಿಂಗ್ ಕ್ಷೇತ್ರದಲ್ಲಿ ಮಾನುಷಿ ಚಿಲ್ಲರ್ ಹೆಸರು ಚಿರಪರಿಚಿತ. 2017ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರುತ್ತಿದ್ದಂತೆ, ರಾಷ್ಟ್ರದ ಗಮನ ಸೆಳೆದಿದ್ದರು ಈ ಹರಿಯಾಣ ತರುಣಿ. ಆದರೆ, ವಿಶ್ವ ಸುಂದರಿ ಪಟ್ಟ ಸಿಕ್ಕ ಬಳಿಕ ಅವರ ಸಿನಿಮಾ ಕರಿಯರ್ ಮಾತ್ರ ವೇಗ ಪಡೆದುಕೊಳ್ಳಲೇ ಇಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಅವರ ಹೆಸರು ತಳುಕು ಹಾಕಿಕೊಂಡರೂ, ಅಧಿಕೃತ ಅಂತ ಆಗಿದ್ದು ಒಂದೇ ಒಂದು ಸಿನಿಮಾ. ಇದೀಗ ಅವರ ಬತ್ತಳಿಕೆಗೆ ಹೊಸ ಸಿನಿಮಾವೊಂದು ಸೇರ್ಪಡೆಗೊಂಡಿದೆ.
ಹೌದು, ಸುದೀರ್ಘ ಮೂರು ವರ್ಷದ ಅವಧಿಯಲ್ಲಿ ಮಾನುಷಿ ಸಹಿ ಮಾಡಿದ್ದ ಸಿನಿಮಾ, ಅಕ್ಷಯ್ ಕುಮಾರ್ ನಾಯಕ್ವತದಲ್ಲಿ ಮೂಡಿಬರಲಿರುವ ‘ಪೃಥ್ವಿರಾಜ್’. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮೂಡಿಬರಲಿರುವ ಈ ಚಿತ್ರ 2021ರಲ್ಲಿ ಶುರುವಾಗಲಿದೆ. ಈ ಸಿನಿಮಾ ನಡುವೆಯೇ ಮಾನುಷಿ ಈಗ ಎರಡನೇ ಸಿನಿಮಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಾಲ್ ನಟಿಸಲಿರುವ ಚಿತ್ರದಲ್ಲಿ ಮಾನುಷಿ ನಾಯಕಿ. ಈ ಹಿಂದೆ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕೃಷ್ಣ ಆಚಾರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಯಶ್ರಾಜ್ ಫಿಲಂಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ವಣವಾಗಲಿದೆ. ಸೆ. 27ರಂದು ಈ ಚಿತ್ರದ ಅಧಿಕೃತ ಘೋಷಣೆ ಆಗಲಿದ್ದು, ಅಕ್ಟೋಬರ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. (ಏಜೆನ್ಸೀಸ್)