

ಬೆಂಗಳೂರು: ತಾವು ಅಭಿನಯಿಸಿದ ಚಿತ್ರಗಳ ಪೈಕಿ, ತಮ್ಮ ಮನಸ್ಸಿಗೆ ಬಹಳ ಹತ್ತಿರವಾದ ಚಿತ್ರ ಯಾವುದಾದರೂ ಇದ್ದರೆ ಅದು ‘ಮಂತ್ರಾಲಯ ಮಹಾತ್ಮೆ’ ಎಂದು ಡಾ. ರಾಜಕುಮಾರ್ ಬಹಳಷ್ಟು ಬಾರಿ ಹೇಳಿಕೊಂಡಿದ್ದುಂಟು. 60ರ ದಶಕದಲ್ಲಿ ಬಿಡುಗಡೆಯಾದ ಈ ಬ್ಲಾಕ್ ಆಂಡ್ ವೈಟ್ ಚಿತ್ರವು, ಇದೀಗ ಕಲರ್ನಲ್ಲಿ ತಯಾರಾಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕೆಲವು ವರ್ಷಗಳ ಹಿಂದೆ, ಡಾ. ರಾಜಕುಮಾರ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಕಪು್ಪ-ಬಿಳುಪಿನಿಂದ ವರ್ಣಕ್ಕೆ ಮಾರ್ಪಾಡು ಮಾಡಲಾಗಿತ್ತು. ಹೀಗೆ ಮಾರ್ಪಾಡಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ‘ಸತ್ಯ ಹರಿಶ್ಚಂದ್ರ’ ಪಾತ್ರವಾಗಿತ್ತು. ಆ ನಂತರ ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್ನಲ್ಲಿ ಬಿಡುಗಡೆ ಮಾಡಲಾಯ್ತು. ಇದೀಗ ಮೂರನೆಯ ಚಿತ್ರವಾಗಿ ‘ಮಂತ್ರಾಲಯ ಮಹಾತ್ಮೆ’ ಹೊರಬರುತ್ತಿದೆ. ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನು ಟಿ.ವಿ. ಸಿಂಗ್ ಠಾಕೂರ್ ನಿರ್ದೇಶನ ಮಾಡಿದ್ದರು. ಹಿರಿಯ ನಿರ್ದೇಶಕ ಭಗವಾನ್ ಅವರು ಈ ಚಿತ್ರದ ಸಹ-ನಿರ್ದೇಶನ ಮಾಡುವುದರ ಜತೆಗೆ ನಿರ್ವಣದಲ್ಲೂ ಮಹತ್ವದ ಪಾತ್ರ ವಹಿಸಿಕೊಂಡಿದ್ದರು. ಈಗ ಭಗವಾನ್ ಅವರ ಮೇಲ್ವಿಚಾರಣೆಯಲ್ಲೇ ಈ ಚಿತ್ರ ಸಹ ಕಲರ್ ಆಗುತ್ತಿದೆ.
ಈ ಕುರಿತು ‘ವಿಜಯವಾಣಿ’ಯ ಜತೆಗೆ ಮಾತನಾಡಿರುವ ಹಿರಿಯ ನಿರ್ದೇಶಕ ಭಗವಾನ್, ‘ಈ ಚಿತ್ರವನ್ನು ಕಲರ್ನಲ್ಲಿ ಮಾಡುವುದು ಪಾರ್ವತಮ್ಮ ರಾಜಕುಮಾರ್ ಅವರ ಆಸೆಯಾಗಿತ್ತು. ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್ನಲ್ಲಿ ಬಿಡುಗಡೆ ಮಾಡಿದಿರಿ, ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನೂ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರು ಹೇಳಿದ್ದರು. ಅವರ ಆಸೆ ಈಗ ಕಾರ್ಯರೂಪಕ್ಕೆ ಬರುತ್ತಿದೆ’ ಎನ್ನುತ್ತಾರೆ ಅವರು. ಲಾಕ್ಡೌನ್ ಶುರುವಾಗುವುದಕ್ಕಿಂತ ಮುಂಚೆಯೇ, ‘ಮಂತ್ರಾಲಯ ಮಹಾತ್ಮೆ’ ಚಿತ್ರದ ಕಲರಿಂಗ್ ಕೆಲಸ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆಯಂತೆ. ವರ್ಷದ ಕೊನೇ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.