

ಬೆಂಗಳೂರು: 'ಟಕ್ಕರ್' ಎಂಬ ಸಿನಿಮಾದ ನಂತರ ಆ ಚಿತ್ರದ ನಾಯಕ ಮನೋಜ್ ಸುದ್ದಿಯೇ ಇರಲಿಲ್ಲ. ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಮುಂದೇನು? ಎಂಬ ಯಾವುದೇ ಪ್ರಶ್ನೆಗೂ ಉತ್ತರ ಇರಲಿಲ್ಲ. ಈಗ ಆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದ್ದು, 'ಧರಣಿ' ಎಂಬ ಇನ್ನೊಂದು ಹೊಸ ಚಿತ್ರಕ್ಕೆ ಮನೋಜ್ ಕುಮಾರ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ. ಉಮೇಶ್ ಮತ್ತು ಕೆ. ಗಣೇಶ್ ಐತಾಳ್ ನಿರ್ಮಿಸುತ್ತಿರುವ ಚಿತ್ರವೇ ಈ ಧರಣಿ. ಚೇತನ್ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮೂರ್ನಾಲ್ಕು ತಿಂಗಳ ಹಿಂದೆಯೇ ಚಿತ್ರದ ಕೆಲಸಗಳು ಸದ್ದಿಲ್ಲದೆ ಆರಂಭವಾಗಿದೆ. ಈಗ ಚಿತ್ರದ ಘೋಷಣೆಯಾಗಿದ್ದು ಸದ್ಯದಲ್ಲೇ ಚಿತ್ರ ಪ್ರಾರಂಭವಾಗಲಿದೆ.
ಈ ಚಿತ್ರದ ಕುರಿತು ಮಾತನಾಡುವ ಮನೋಜ್, 'ನನ್ನ ಹಿಂದಿನ ಚಿತ್ರಕ್ಕೂ, 'ಧರಣಿ'ಗೂ ಅಜಗಜಾಂತರ ವ್ಯತ್ಯಾಸವಿದೆ. ಅದು ಸೈಬರ್ ಕ್ರೈಂ ಕಥಾವಸ್ತು ಹೊಂದಿತ್ತು. 'ಧರಣಿ'ಯಲ್ಲಿ ಸಿಟಿ ಲೈಫ್ ಕಾಣೋದೇ ಇಲ್ಲ. ಇದು ಪಕ್ಕಾ ದೇಸೀ ಸೊಗಡಿನ ಸಿನಿಮಾ. ತೀರಾ ಹೊಸದೆನ್ನುವ ಎಲಿಮೆಂಟುಗಳು ಇದರಲ್ಲಿವೆ. ಜೊತೆಗೆ ಕಾಡುವ ಕತೆಯೂ ಇರಲಿದೆ. ನನ್ನನ್ನು ಇಲ್ಲಿ ಹೊಸ ಲುಕ್ನಲ್ಲಿ ನೋಡಬಹುದು' ಎನ್ನುತ್ತಾರೆ ಮನೋಜ್.
'ಧರಣಿ' ಚಿತ್ರದ ಚಿತ್ರೀಕರಣ ಹೊಸ ವರ್ಷಕ್ಕೆ ಶುರುವಾಗಲಿದೆ. ಈ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಸುರೇಶ್ ಬಾಬು ಛಾಯಾಗ್ರಹಣ ಇರಲಿದ್ದು, ಸದ್ಯದಲ್ಲೇ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬ ವಿಷಯ ಹೊರಬೀಳಲಿದೆ.