ಮನೋಜ್ ಬಾಜ್ಪೇಯಿ ಎಲ್ಲಿ ಕಳೆದು ಹೋಗಿದ್ದಾರೆ ಗೊತ್ತಾ?

Manoj Bajpayee
Published on

ಒಂದು ಕಡೆ ಲಾಕ್‌ಡೌನ್‌ನಿಂದಾಗಿ ಬಾಲಿವುಡ್ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲಿ ಸಿಕ್ಕಿಕೊಂಡು, ಕಾಲಹರಣ ಮಾಡುತ್ತಿರುವಾಗ, ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ಮನೋಜ್ ಬಾಜ್ಪೇಯಿ ಎಲ್ಲೋ ಕಳೆದು ಹೋಗಿದ್ದಾರೆ. ಅವರೆಲ್ಲಿ ಮಿಸ್ ಆಗಿದ್ದಾರೆ ಎಂದು ಹುಡುಕಹೊರಟ ಬಾಲಿವುಡ್ ಮಂದಿಗೆ ಮನೋಜ್, ಕೊನೆಗೂ ಸಿಕ್ಕಿದ್ದಾರೆ. ಹಾಗಾದರೆ, ಈಗ ಅವರೆಲ್ಲಿದ್ದಾರೆ ಎಂದರೆ, ಅದಕ್ಕೆ ಉತ್ತರ ಉತ್ತರಖಂಡ್.

ಹೌದು, ಮನೋಜ್ ಬಾಜ್ಪೇಯಿ ಉತ್ತರಖಂಡ್‌ನಲ್ಲಿ ಸಿಕ್ಕಿಕೊಂಡಿದ್ದಾರೆ. ಅವರ ಜತೆಗೆ ಹೆಂಡತಿ ಮತ್ತು ಮಗಳು ಸಹ ಇದ್ದಾಳೆ. ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂದ, ಅವರಿಗೆ ಮುಂಬೈಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ದೂರದ ಮುಂಬೈನಿಂದ, ಕುಟುಂಬ ಸಮೇತ ಉತ್ತರಖಾಂಡ್‌ನಲ್ಲೇ ಕಾಲಕಳೆಯುತ್ತಿದ್ದಾರೆ ಮನೋಜ್.

ಇಷ್ಟಕ್ಕೂ ಅವರು ಅಲ್ಲಿಗೆ ಹೋಗಿದ್ದೇಕೆ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಇಲ್ಲಿದೆ ಉತ್ತರ. ‘ದಿ ಫ್ಯಾಮಿಲಿ ಮ್ಯಾನ್’ ನಂತರ ಮನೋಜ್ ಸದ್ದಿಲ್ಲದೆ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ದೀಪಕ್ ದೋಬ್ರಿಯಾಲ್ ಸಹ ಇದ್ದಾರೆ. ಇಬ್ಬರೂ ಉತ್ತರಖಾಂಡ್‌ನಲ್ಲಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ನಗರದಿಂದ ಸ್ವಲ್ಪ ದೂರ ಇದ್ದಿದ್ದರಿಂದ ಸುದ್ದಿ ಗೊತ್ತಾಗಿಲ್ಲ. ಸುದ್ದಿ ಗೊತ್ತಾಗುವಷ್ಟರಲ್ಲಿ, ಮುಂಬೈಗೆ ವಾಪಸ್ಸು ಬರುವ ಹಾಗಿರಲಿಲ್ಲ. ಪುಣ್ಯಕ್ಕೆ ಹೆಂಡತಿ ಶಬಾನಾ ಮತ್ತು ಮಗಳು ಅವರ ಜತೆಗಿದ್ದರಂತೆ. ಹಾಗಾಗಿ ಕಳೆದ ಮೂರು ವಾರಗಳಿಂದ ್ಯಾಮಿಲಿ ಜತೆಗೆ ದೂರದ ಉತ್ತರಖಾಂಡದಲ್ಲಿ ಬೀಡು ಬಿಟ್ಟಿದ್ದಾರೆ ಮನೋಜ್.

ಮುಂಬೈನಲ್ಲಿದ್ದರೆ, ಸದಾ ಶೂಟಿಂಗ್ ಎಂದು ಹೊರಗಿರುವ ಮನೋಜ್, ಈಗ ಲಾಕ್‌ಡೌನ್ ಆಗಿರುವುದರಿಂದ ಪಕ್ಕಾ ‘ಫ್ಯಾಮಿಲಿ ಮ್ಯಾನ್’ ಆಗಿಬಿಟ್ಟಿದ್ದಾರೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net