ಸಲಗದಲ್ಲಿ ಮಂಗಳೂರು ಅಂಡರ್​ವರ್ಲ್ಡ್

Salaga 29 Jan 20
Published on

ಬೆಂಗಳೂರು: ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ‘ಸಲಗ’ ಸಿನಿಮಾದಲ್ಲಿ ರೌಡಿಸಂ ಕಥಾಹಂದರ ಇರುವ ಮಾಹಿತಿ ಇತ್ತು. ಇದೀಗ ಈ ಚಿತ್ರದಲ್ಲಿ ಮಂಗಳೂರು ಅಂಡರ್​ವರ್ಲ್ಡ್ ಕುರಿತ ಕಥೆ ಇರುವುದು ಕೂಡ ಬಹಿರಂಗಗೊಂಡಿದೆ.

ಹೌದು.. ‘ಸಲಗ’ ಚಿತ್ರದಲ್ಲಿ ಕಥೆ ಮಂಗಳೂರು ಅಂಡರ್​ವರ್ಲ್ಡ್​ನಿಂದಲೇ ಆರಂಭಗೊಳ್ಳಲಿದ್ದು, ಅದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಮೂರು ದಿನ ಕರಾವಳಿ ತೀರದಲ್ಲಿ ಕಸರತ್ತು ನಡೆಸಿದೆ. ಸೋಮವಾರದಿಂದ ಕರಾವಳಿಯಲ್ಲಿ ಶೂಟಿಂಗ್ ಆರಂಭಿಸಿರುವ ಚಿತ್ರತಂಡ ಬುಧವಾರದವರೆಗೂ ಮಂಗಳೂರು, ಮಲ್ಪೆ, ಉಡುಪಿ, ಕುಂದಾಪುರಗಳಲ್ಲಿ ಹಲವಾರು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದೆ. ನಿರ್ದೇಶಕ ಹಾಗೂ ನಾಯಕ ಆಗಿರುವ ದುನಿಯಾ ವಿಜಿ, ಕರಾವಳಿಯ ಕಡಲತೀರ, ಮೀನು ಮಾರುಕಟ್ಟೆ ಮುಂತಾದೆಡೆ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈ ಮೂಲಕ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಈ ಮಧ್ಯೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚುರುಕುಗೊಳಿಸಿರುವ ಚಿತ್ರತಂಡ, ಫೆಬ್ರವರಿ ಕೊನೆಯಲ್ಲಿ ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದೆ.

ಕೆ.ಪಿ. ಶ್ರೀಕಾಂತ್ ಅವರ ಅದ್ದೂರಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ದುನಿಯಾ ವಿಜಿಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್​ರಾಜ್ ಸಂಗೀತ ನಿರ್ದೇಶನವಿದೆ.

ಮಂಗಳೂರು ಭೂಗತ ಜಗತ್ತಿನ ಜತೆ ಬೆಂಗಳೂರಿಗೆ ನಂಟಿರುವ ದೃಶ್ಯಗಳನ್ನು ಕರಾವಳಿಯಲ್ಲಿ ಚಿತ್ರೀಕರಿಸಲಾಗಿದೆ. ಈ ದೃಶ್ಯಗಳಲ್ಲಿ ಕರಾವಳಿಯ ಸೊಗಡು ಇರುವುದರಿಂದ ಮಂಗಳೂರಿನ ಹುಡುಗರನ್ನೇ ಶೂಟಿಂಗ್​ಗೆ ಬಳಸಿಕೊಳ್ಳಲಾಗಿದೆ. | ಕೆ.ಪಿ.ಶ್ರೀಕಾಂತ್ ನಿರ್ಮಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net