ಟ್ರೋಲ್​ ಮಾಡಿದವನ ವಿರುದ್ಧ ದೂರು ದಾಖಲಿಸಿದ ಕಿರುತೆರೆ ನಟಿ

Manasi Joshi - Final
Published on

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ನಟಿಸುತ್ತಿರುವ ಮಾನಸಿ ಜೋಷಿ, ಇದೀಗ ಸೈಬರ್​ ಕ್ರೈಮ್​ ಪೊಲೀಸರ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಭಿಮಾನಿ ಎಂದು ಹೇಳಿಕೊಂಡು ಟ್ರೋಲ್​ ಮಾಡಿದವನ ವಿರುದ್ಧ ದೂರು ದಾಖಲಿಸಿದ್ದಾರೆ.

ಮಾನಸಿ ಜೋಷಿ ಅವರು ಇನ್​ಸ್ಟಾಗ್ರಾಂನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅವರ ಹೆಸರಿನಲ್ಲಿ ಕೆಲವು ಫ್ಯಾನ್​ ಪೇಜ್​ಗಳು ಸಹ ಇವೆ. ಈ ಮಧ್ಯೆ, ಅಭಿಮಾನಿ ಎಂದು ಹೇಳಿಕೊಂಡು ಬಂದವನೊಬ್ಬ, ಮಾನಸಿ ಅವರ ಮೊಬೈಲ್​ ನಂಬರ್​ ಪಡೆಯಲು ಪ್ರಯತ್ನಿಸಿದ್ದಾನೆ.

ಯಾವಾಗ ಮಾನಸಿ ತಮ್ಮ ನಂಬರ್​ ಕೊಡುವುದು ಹಿಂದೇಟು ಹಾಕಿದರೋ, ಆಗ ಆತ ಇನ್ನೆರೆಡು ಅಕೌಂಟ್​​ ತೆರೆದು ನಂಬರ್​ ಕೇಳಿದ್ದಾನೆ. ಆಗಲೂ ಆತನ ಬಗ್ಗೆ ಮಾನಸಿ ಬಗ್ಗಿಲ್ಲ. ಸಿಟ್ಟಾದ ಆತ, ಆಕೆಯ ವಿರುದ್ಧ ಟ್ರೋಲ್​ ಮಾಡುವುದಕ್ಕೆ ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿದ ಮಾನಸಿ, ಸೀದಾ ಸೈಬರ್​ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಈ ಕುರಿತು ತಮ್ಮ ಅಭಿಮಾನಿಗಳ ಪೇಜ್​ ಮೂಲಕ ಮಾಹಿತಿ ನೀಡಿರುವ ಮಾನಸಿ, 'ನನ್ನ ಇನ್​ಸ್ಟಾಗ್ರಾಂ ಖಾತೆ ಕಾಣಿಸದೇ ಇರುವುದಕ್ಕೆ ನಿಮ್ಮಲ್ಲಿ ಹಲವರಿಗೆ ಆತಂಕ ಉಂಟಾಗಿರಬಹುದು. ಯಾರೂ ಗಾಬರಿಯಾಗಬೇಡಿ. ನನ್ನ ಹೆಸರಿನಲ್ಲಿ ಫ್ಯಾನ್​ ಪೇಜ್​ ಪ್ರಾರಂಭಿಸಿ, ಟ್ರೋಲ್​ ಮಾಡುತ್ತಿರುವ ಕಾರಣ ನಾನು ಮತ್ತು ನನ್ನ ತಂಡ, ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ಸೈಬರ್​ ಕ್ರೈಮ್​ ಮೊರೆ ಹೋಗಿದ್ದೇನೆ. ನನಗೆ ಸಪೋರ್ಟ್​ ಮಾಡಿದ ಎಲ್ಲರಿಗೂ ಧನ್ಯವಾದಗಳು' ಎಂದು ಮಾನಸಿ ಹೇಳಿಕೊಂಡಿದ್ದಾರೆ.

ಈ ತರಹ ಅಭಿಮಾನಿಗಳು ಎಂದು ಹೇಳಿಕೊಂಡು ಬಂದು, ನಟ-ನಟಿಯರಿಗೆ ಕಿರುಕುಳ ನೀಡುವ ಪರಿಪಾಠ ಹೆಚ್ಚಾಗುತ್ತಿರುವ ಜತೆಗೆ ಸೆಲೆಬ್ರಿಟಿಗಳ ಪೇಜ್​ಗಳನ್ನು ಹ್ಯಾಕ್​ ಮಾಡುವುದು ಸಹ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸೈಬರ್​ ಕ್ರೈಂ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೋ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net