

ಬೆಂಗಳೂರು: ‘ಮುಂಗಾರು ಮಳೆ’ ಸಿನಿಮಾ ತೆರೆಕಂಡು 18 ವರ್ಷಗಳ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕ ಇ.ಕೃಷ್ಣಪ್ಪ ‘ಮನದ ಕಡಲು’ ಮೂಲಕ ಮತ್ತೆ ಒಂದಾಗಿರುವುದು ಗೊತ್ತಿದೆ. ಈ ಸಿನಿಮಾದಲ್ಲಿ ‘ಫಿಸಿಕ್ಸ್ ಟೀಚರ್’ ಸುಮುಖ ನಾಯಕನಾಗಿದ್ದು, ಅವರಿಗೆ ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ಜೋಡಿಯಾಗಿದ್ದಾರೆ. ಕೆಲ ದಿನಗಳ ಹಿಮದಷ್ಟೆ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಅಂತಿಮ ಘಟ್ಟ ತಲುಪಿವೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಧುಮುಕಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ರಿಲೀಸ್ ದಿನಾಂಕ ೋಷಿಸಲಾಗಿದೆ. ಇದೇ ತಿಂಗಳು 28ರಂದು ಅಂದರೆ, ಯುಗಾದಿ ಹಬ್ಬದ ಎರಡು ದಿನ ಮುಂಚಿತವಾಗಿ ಸಿನಿಮಾ ತೆರೆಗೆ ಬರುತ್ತಿದೆ. ಯೋಗರಾಜ್ ಭಟ್, ‘ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲೂ ರಾಜ್ಯದ 12 ಜಿಲ್ಲೆಗಳಲ್ಲಿ ಶೂಟಿಂಗ್ ಮಾಡಿರುವುದು ವಿಶೇಷ. ಮಹಾರಾಷ್ಟ್ರದ ಮುರುಡ್ ಜಂಜೀರ್ ಎಂಬ ಸಮುದ್ರ ಮಧ್ಯದ ಕೋಟೆಯಲ್ಲಿ ಚಿತ್ರೀಕರಣದ ಪರ್ಮಿಶನ್‌ಗೆ 15 ದಿನ ತಿರುಗಾಡಬೇಕಾಯಿತು. ಇದೊಂದು ಯುದ್ಧ ಮಾಡಿದ ಅನುಭವ. ಇನ್ನು ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.
ಟ್ರೆಂಡಿ ಕಥೆ: ‘ಮನದ ಕಡಲು’ ಯುವ ಜೋಡಿಗಳ ಸಿನಿಮಾ. ಅಷ್ಟೇ ಟ್ರೆಂಡಿ ಹಾಗೂ ತಾಜಾತನದಿಂದ ಕೂಡಿದೆ ಎನ್ನುವ ಯೋಗರಾಜ್ ಭಟ್, ‘ಕಡಲಿಗೆ ಒಂದು ಕಾವು ಇದೆ. ಅದು ಸಿಹಿಯಲ್ಲ. ನದಿ ಅಥವಾ ಫಾಲ್ಸ್ ತರಹ ಮಧುರವಲ್ಲ. ಕಡಲಿನ ಮುಂದೆ ನಿಂತಾಗ ನಮಗೆ ಕೀಳರಿಮೆ ಬರುತ್ತದೆ. ಪ್ರಕೃತಿ ಮುಂದೆ ನಾವೆಷ್ಟು ಚಿಕ್ಕವರು ಎನಿಸುತ್ತದೆ. ಆರಂಭ, ಇಂಟರ್ವೆಲ್ ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಕಡಲು ಬರುತ್ತದೆ. ಇದೊಂದು ತಾಜಾತನದಿಂದ ಕೂಡಿರುವ ಟ್ರೆಂಡಿ ಕಥೆ’ ಎಂದು ವಿವರಿಸುತ್ತಾರೆ.