manada kadalu movie review: ತ್ರಿಕೋನ ಪ್ರೇಮಕಥೆಯಲ್ಲಿ ಭಟ್ಟರ ಅಧ್ಯಾತ್ಮ

manada kadalu1
Published on

ಚಿತ್ರ: ಮನದ ಕಡಲು

ನಿರ್ದೇಶನ: ಯೋಗರಾಜ್ ಭಟ್

ನಿರ್ಮಾಣ: ಇ.ಕೃಷ್ಣಪ್ಪ

ತಾರಾಗಣ: ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಹಾಗೂ ಮತ್ತಿತರರು.

ರೇಟಿಂಗ್: 3.5

ಶಿವ ಸ್ಥಾವರಮಠ

‘ಮುಂಗಾರು ಮಳೆ’ಯಲ್ಲಿ ಮಳೆ ಹನಿಗಳ ನಡುವೆ ಕಾಡುವ ಪ್ರೇಮಿಯ ಕಣ್ಣೀರಿನ ಕಥೆ ಹೇಳಿದ್ದ ಯೋಗರಾಜ್ ಭಟ್ಟರು ಇದೀಗ ‘ಮನದ ಕಡಲು’ ಮೂಲಕ ತಾರುಣ್ಯ ಬದುಕಿನ ಭಾರವಾದ ಭಾವನೆಗಳನ್ನು ಹಗುರುವಾಗಿಸಿ, ಬದುಕಿಗಿಂತ ಯಾವುದೂ ಮುಖ್ಯವಲ್ಲ ಎಂದಿದ್ದಾರೆ. ತ್ರಿಕೋನ ಪ್ರೇಮಕಥೆಯಲ್ಲಿ ಬದುಕನ್ನು ಅನ್ವೇಷಿಸಿ, ತಮ್ಮದೇ ಸ್ಟೈಲ್‌ನಲ್ಲಿ ಜೀವನ ಪ್ರೀತಿಯ ಬೋಧನೆ ಮಾಡಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿ ಸುಮುಖ ಕಾಲೇಜು ಅಟೆಂಡರ್ ಸಾವಿನ ಬಳಿಕ ಓದಿಗೆ ಗುಡ್‌ಬೈ ಹೇಳಿ ಜೀವನವನ್ನು ಎಂಜಾಯ್ ಮಾಡುತ್ತಿರುತ್ತಾನೆ. ಒಮ್ಮೆ ಕಡಲಿನಲ್ಲಿ ಧ್ಯಾನಿಸುತ್ತಿರುವಾಗ ಆತನಿಗೆ ರಾಶಿಕಾ ಎದುರಾಗುತ್ತಾಳೆ. ಆಕೆ ಕ್ರಿಕೆಟರ್ ಆದರೂ, ಬದುಕಿನಲ್ಲಿ ಅನಿಶ್ಚಿತತೆ ಎದುರಿಸಿದವಳು. ಸುಮುಖ ರಾಶಿಕಾ ಬಳಿ ಪ್ರೇಮನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ, ಆಕೆ ಐದು ತಿಂಗಳ ಬಳಿಕ ಉತ್ತರಿಸುವುದಾಗಿ ತಿಳಿಸುತ್ತಾಳೆ. ಐದು ತಿಂಗಳ ಬಳಿಕ ಸುಮುಖ ಅದೇ ಜಾಗಕ್ಕೆ ಬಂದಾಗ ರಾಶಿಕಾ ಕಾಣೆಯಾಗಿರುತ್ತಾಳೆ. ಆಕೆ, ಗೆಳತಿ ಅಂಜಲಿ ಇರುವ ದೋಣಿದುರ್ಗ ಎಂಬ ಕೋಟೆ ಊರಿನಲ್ಲಿದ್ದಾಳೆ ಎಂದು ತಿಳಿದು ಸುಮುಖ ಅಲ್ಲಿಗೆ ಹೊರಡುತ್ತಾನೆ. ಆತ ಅಲ್ಲಿಗೆ ಹೋಗಿ ಸೇರುತ್ತಲೇ ಸುಮುಖನ ಮೇಲೆ ರಾಶಿಕಾ ಗೆಳತಿ ಅಂಜಲಿಗೂ ಪ್ರೇಮಾಂಕುರವಾಗುತ್ತದೆ. ಹಾಗಾದರೆ ಈ ತ್ರಿಕೋನ ಪ್ರೇಮಕ್ಕೆ ಕಾರಣವೇನು? ಯೋಗರಾಜ ಭಟ್ಟರು ಈ ಕಥೆ ಮೂಲಕ ಏನು ಹೇಳಲು ಹೊರಟಿದ್ದಾರೆ? ಅವರ ಮನದ ಇಂಗಿತ ಏನು ಎಂಬುದನ್ನು ತಿಳಿಯಬೇಕಾದರೆ ‘ಮನದ ಕಡಲ’ನ್ನು ಕಣ್ತುಂಬಿಕೊಳ್ಳಬೇಕು.

ರಾಜರ ಕಾಲದ ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಯೋಗರಾಜ ಭಟ್ ‘ಮನದ ಕಡಲು’ ಸೃಷ್ಟಿಸಿದ್ದಾರೆ. ಅವರ ಗುರಿ ಹಾಗೂ ಜೀವನ ದೃಷ್ಟಿಕೋನ ಇಲ್ಲಿ ನಿರೂಪಿತವಾಗಿದೆ. ಜತೆಗೆ ತಾರುಣ್ಯದ ತವಕ-ತಲ್ಲಣಗಳಿಗೆ ಉತ್ತರವಿದೆ. ಹಾಗಾಗಿ, ಈ ಕಥೆ ಯುವಜನರಿಗೆ ಹತ್ತಿರವಾಗುತ್ತದೆ. ಇಡೀ ಸ್ಟೋರಿಯಲ್ಲಿ ಭಟ್ಟರ ಹಿಂದಿನ ಸಿನಿಮಾಗಳ ಶೈಲಿ ಇದೆ. ಭಾವ ತೀವ್ರವಾದ ಸಂಭಾಷಣೆ, ಕಾಡುವ ಪಾತ್ರಗಳ ಜತೆಗೆ ಅರ್ಥವಾಗದ ಭಾಷೆಯೊಂದು ಸೇರ್ಪಡೆಯಾಗಿದೆ. ಇಡೀ ಪ್ರೇಮಕಥೆ ದೃಶ್ಯಕಾವ್ಯದಂತೆ ಮೂಡಿಬಂದಿದೆ. ಎಲ್ಲಿಯೂ ಬೋರ್ ಎನಿಸದೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಯೋಗರಾಜ ಭಟ್ ಮನದ ಕಡಲಿನಲ್ಲಿ ಭಾವಲೋಕದ ಲಹರಿಯನ್ನೇ ಸೃಷ್ಟಿಸಿದ್ದಾರೆ.

ಇಡೀ ಕಥೆಗೆ ಪೂರಕವಾಗಿ ಪಾತ್ರಗಳು ಅಷ್ಟೇ ಸೊಗಸಾಗಿ ಮೂಡಿಬಂದಿವೆ. ಮುಖ್ಯಭೂಮಿಕೆಯಲ್ಲಿರುವ ಸುಮುಖ, ರಾಶಿಕಾ, ಅಂಜಲಿ ಸ್ಪರ್ಧೆಗಳಿದವರಂತೆ ಅಭಿನಯಿಸಿದ್ದು, ಭರವಸೆ ಮೂಡಿಸುತ್ತಾರೆ. ಇನ್ನು ರಂಗಾಯಣ ರಘು ಆದಿ ಮಾನವನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿಯೇ ಹೊಸ ಭಾಷೆ ಸೃಷ್ಟಿಸಲಾಗಿದೆ. ದತ್ತಣ್ಣ ಪಾತ್ರಕ್ಕಿಂತ ಅವರ ಸಂಭಾಷಣೆ ಹೈಲೈಟ್. ‘ಮನದಲ್ಲಿ ಬೆಳಕು ಇರಬೇಕು, ಇಲ್ಲಂದ್ರೆ ಬದುಕು ಕತ್ತಲಾಗುತ್ತದೆ’ ಎಂಬ ಅವರ ಡೈಲಾಗ್ ಮನಸ್ಸಿಗೆ ನಾಟುತ್ತದೆ. ಕೋಟೆ ದೃಶ್ಯಗಳನ್ನು ಸಂತೋಷ್ ರೈ ಪಾತಾಜೆ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಸಾವಿಗಿಂತ ಬದುಕು ದೊಡ್ಡದು ಎಂದು ಸಾರುವ ‘ಮನದ ಕಡಲು’ ಮತ್ತೆ ಮತ್ತೆ ನೋಡಿಸಿಕೊಳ್ಳುವ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net