

ಬೆಂಗಳೂರು: ‘ಮುಂಗಾರುಮಳೆ’ ಚಿತ್ರದ ಮೂಲಕ ಒಲವಿನ ಮಳೆ ತರಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ.ಕೃಷ್ಣಪ್ಪ ಇದೀಗ ‘ಮನದ ಕಡಲು’ ಮೂಲಕ ಹೊಸ ಲೋಕ ಸೃಷ್ಟಿಸಲು ಹೊರಟಿದ್ದಾರೆ. ಅಂದು ‘ಮುಂಗಾರು ಮಳೆ’, ಇಂದು ‘ಮನದ ಕಡಲು’ ಎಂಬ ಟ್ಯಾಗ್‌ಲೈನ್ ಇರುವ ಈ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್ ಹಾಗೂ ರಾಶಿಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಪೈಕಿ ರಾಶಿಕಾ ಶೆಟ್ಟಿಗೆ ಇದು ಮೊದಲ ಪ್ರಯತ್ನ. ಇಂದು ಬಿಡುಗಡೆಯಾಗುತ್ತಿರುವ ಮೊದಲ ಚಿತ್ರದ ಮೇಲೆ ರಾಶಿ ನಿರೀಕ್ಷೆ ಇಟ್ಟಿರುವ ಅವರು ‘ವಿಜಯವಾಣಿ’ ಜತೆ ಪಾತ್ರ ಹಾಗೂ ಸಿನಿ ಜರ್ನಿ ಕುರಿತು ಮುಕ್ತವಾಗಿ ಮಾತನಾಡಿದರು. ‘ನಾನು ಮೂಲತಃ ಚಿಕ್ಕಮಗಳೂರಿನ ಹುಡುಗಿ. ಸದ್ಯ ತಂದೆ-ತಾಯಿ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಿನಿಮಾ ರಂಗದೊಂದಿಗೆ ನಂಟು ಬೆಳೆಯುತ್ತದೆ ಎಂಬ ಕಾರಣಕ್ಕೆ ಪದವಿ ಮುಗಿದ ಬಳಿಕ ನಾನು ಫ್ಯಾಷನ್ ಡಿಸೈನ್ ಆರಂಭಿಸಿದೆ. ನಾನು ಚಿಕ್ಕವಳಿರುವಾಗ ‘ತನನಂ ತನನಂ’ ಚಿತ್ರದ ಹಾಡಿನಲ್ಲಿ ಡಾನ್ಸ್ ಮಾಡಿದ್ದೆ. ಆಗಿನಿಂದಲೂ ನಟಿಯಾಗಬೇಕು ಎಂಬ ಆಸೆ ಚಿಗುರಿತ್ತು. ಹೀಗೆ ನಾನು ಫ್ಯಾಷನ್ ಡಿಸೈನ್, ಆ್ಯಡ್ ಪ್ರಮೋಷನ್ ಮಾಡುತ್ತಿದ್ದೆ. ಆಗ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ನನ್ನ ಫೋಟೋಗಳನ್ನು ಯೋಗರಾಜ್ ಭಟ್ ಸರ್‌ಗೆ ತೋರಿಸಿದ್ದಾರೆ. ಅವರು ಆಡಿಷನ್‌ಗೆ ಕರೆದು, ಚರ್ಚಿಸಿ ನನ್ನನ್ನು ಫೈನಲ್ ಮಾಡಿದ್ದರು. ಇದೀಗ ‘ಮನದ ಕಡಲು’ ಮೂಲಕ ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಖುಷಿ’ ಎಂದು ಹೇಳಿಕೊಳ್ಳುತ್ತಾರೆ.
ಕ್ರಿಕೆಟರ್ ಪಾತ್ರ: ರಾಶಿಕಾ ಈ ಚಿತ್ರದಲ್ಲಿ ಕ್ರಿಕೆಟರ್ ಆಗಿದ್ದಾರೆ. ಕೇವಲ ಕ್ರಿಕೆಟ್‌ಗೆ ಮಾತ್ರ ಪಾತ್ರ ಸೀಮಿತವಾಗಿಲ್ಲ. ಬದಲಾಗಿ ಬದುಕಿಗೆ ಹತ್ತಿರವಾದಂತಹ ಪಾತವಾಗಿದೆ ಎನ್ನುವ ಅವರು, ‘ಇಲ್ಲಿ ಕ್ರಿಕೆಟರ್ ಪಾತ್ರ ಎಂಬುದಷ್ಟೇ ಹೇಳಬಹುದು. ಆದರೆ, ಅಲ್ಲೂ ಹೊಸತನವಿದೆ. ಯೋಗರಾಜ್ ಭಟ್ ಸರ್ ಅಚ್ಚುಕಟ್ಟಾಗಿ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಒಬ್ಬರ ಜೀವನದಲ್ಲಿ ಅಭದ್ರತೆ ಸೃಷ್ಟಿಯಾದಾಗ ಅವರು ತೆಗೆದುಕೊಳ್ಳುವ ನಿರ್ಧಾರಗಳದಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ನನ್ನ ಪಾತ್ರ ಪ್ರತಿನಿಧಿಸುತ್ತದೆ. ಜರ್ನಿ ಕೂಡ ಅಷ್ಟೇ ಚಾಲೆಂಜಿಂಗ್ ಆಗಿತ್ತು. ಕ್ರಿಕೆಟ್ ಬ್ಯಾಟ್ ಹಿಡಿಯಲು ಬರದ ನಾನು 15 ದಿನಗಳ ಕಾಲ ಸತತ ಬ್ಯಾಟಿಂಗ್ ತರಬೇತಿ ಪಡೆದೆ. ಈಗ ಕ್ರಿಕೆಟರ್ ಆಗುವಷ್ಟು ಆತ್ಮಸ್ಥೈರ್ಯ ಬಂದಿದೆ’ ಎನ್ನುವ ರಾಶಿಕಾಗೆ ವಿರಾಟ್ ಕೊಹ್ಲಿ ಫೇವರಿಟ್ ಕ್ರಿಕೆಟ್‌ರಂತೆ.
ಭಟ್ ಸರ್ ಗಾಡ್ ಫಾದರ್: ಯೋಗರಾಜ್ ಭಟ್ ಅವರೇ ‘ನನ್ನ ಗಾಡ್‌ಫಾದರ್’ ಎನ್ನುವ ರಾಶಿಕಾ, ‘ಹೊಸಬರು ಚಿತ್ರರಂಗಕ್ಕೆ ಬರುವುದಾದರೆ ಮೊದಲು ಯೋಗರಾಜ್ ಭಟ್ ಸರ್ ಬಳಿ ಕೆಲಸ ಮಾಡಬೇಕು. ಅವರು ನಮ್ಮ ಸ್ಕಿಲ್ ಸರ್ಚ್ ಮಾಡ್ತಾರೆ. ಹೊಸಬರಲ್ಲಿ ಇರುವ ಗೊಂದಲಗಳಿಗೆ ಪರಿಹಾರ ನೀಡಿ, ಎನರ್ಜಿ ಬೂಸ್ಟ್ ಮಾಡ್ತಾರೆ’ ಎಂದು ಯೋಗರಾಜ್ ಭಟ್ ಜತೆಗಿನ ಒಡನಾಟವನ್ನು ನೆನಪಿಸಿಕೊಳ್ಳುತ್ತಾರೆ.
‘ಪ್ಯಾರ್’ ಮುಂದಿನ ಸಿನಿಮಾ: ಈಗಾಗಲೇ ‘ಮನದ ಕಡಲು’ ಚಿತ್ರದ ವಿಶೇಷ ಪ್ರದರ್ಶನವಾಗಿದ್ದು, ಧ್ರುವ ಸರ್ಜಾ, ಇಂದ್ರಜಿತ್ ಲಂಕೇಶ್ ಸೇರಿ ಹಲವರು ರಾಶಿಕಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಕೆಲ ಸ್ಕ್ರಿಪ್ಟ್‌ಗಳನ್ನು ಕೇಳಿರುವ ಅವರು, ಸದ್ಯ ರವಿಚಂದ್ರನ್ ಜತೆ ‘ಪ್ಯಾರ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.