ಸುಮುಖ ಪಾತ್ರ ನನ್ನ ಪ್ರತಿಬಿಂಬ: ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ‘ಮನದ ಕಡಲು’ ನಾಯಕ

s1
Published on

ಬೆಂಗಳೂರು: ‘‘ಮನದ ಕಡಲು’ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸುಮುಖ. ಪಾತ್ರಕ್ಕೆ ನನ್ನ ಹೆಸರೇ ಇದೆ. ಅಲ್ಲಿನ ಎಮೋಷನ್, ಯಾತನೆ ಹಾಗೂ ನಡವಳಿಕೆ ಎಲ್ಲವೂ ನನ್ನವೇ. ಹಾಗಾಗಿ ಅದು ಕೇವಲ ಪಾತ್ರವಲ್ಲ, ನನ್ನ ಪ್ರತಿಬಿಂಬದಂತೆ ಕಾಣಿಸುತ್ತದೆ’.-ಇದು ‘ಮನದ ಕಡಲು’ ಚಿತ್ರದ ನಾಯಕ ಸುಮುಖ ಪಾತ್ರವನ್ನು ಪರಿಚಯಿಸಿಕೊಂಡ ರೀತಿ.

‘ಫಿಸಿಕ್ಸ್ ಟೀಚರ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡ ಸುಮುಖ ಇದೀಗ ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ನಾಯಕರಾಗಿದ್ದಾರೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಜರ್ನಿ ಕುರಿತು, ‘ನನ್ನ ಮನೆಯಲ್ಲಿ ಸಿನಿಮಾ ವಾತಾವರಣ ಇತ್ತು. ತಾತ ರಾಮಸ್ವಾಮಿ ಕನ್ನಡ ಸಿನಿಮಾಗಳಿಗೆ ಬರವಣಿಗೆ ಮಾಡುತ್ತಿದ್ದರು. ಅಪ್ಪ-ಅಮ್ಮ ರಂಗಭೂಮಿ ಕಲಾವಿದರಾಗಿದ್ದು, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಈ ವಾತಾವರಣ ನನ್ನನ್ನು ಕಲಾರಂಗಕ್ಕೆ ಸೆಳೆಯಿತು. ಇನ್ನೊಂದು ನಾನು ಚಿಕ್ಕವನಿರುವಾಗ ಕನ್ನಡದ ‘ಮುನ್ನುಡಿ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ. ಅಲ್ಲಿ ನಾನು ತಾರಾಮ್ಮನ ಮಗಳಾಗಿ ಅಭಿನಯಿಸಿರುವುದು ವಿಶೇಷ. ಇನ್ನು ಮುಂದುವರಿದು ಕರೊನಾ ಬಳಿಕ ನಾನು, ಸ್ನೇಹಿತರ ಜತೆ ಸೇರಿ ‘ಫಿಸಿಕ್ಸ್ ಟೀಚರ್ ಸಿನಿಮಾ ಮಾಡಿದ್ದೆ. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಇದಾದ ಕೆಲವು ದಿನಗಳ ಬಳಿಕ ನನಗೆ ‘ಮನದ ಕಡಲು’ ತಂಡದಿಂದ ಕರೆ ಬಂತು. ಆಡಿಷನ್‌ಗೆ ಬರುವಂತೆ ಸೂಚಿಸಿದರು. ಇಲ್ಲಿ ಸಣ್ಣ ಪಾತ್ರ ಇರಬಹುದು ಎಂದುಕೊಂಡೆ ನಾನು ಹೋಗಿದ್ದೆ. ಅಲ್ಲಿಗೆ ಹೋದಾಗ ಗೊತ್ತಾಯಿತು. ನಾನೇ ಸಿನಿಮಾದ ನಾಯಕ, ಇದರಲ್ಲಿ ಇಬ್ಬರು ಹೀರೋಯಿನ್ ಇರುತ್ತಾರೆ ಎಂದರು. ಅದು ಆಶ್ಚಯವೇ ತಂದಿತ್ತು. ಮುಂದೆ ಯೋಗರಾಜ್ ಭಟ್ ಸರ್ ಅವರೇ ಕೈಹಿಡಿದು ನಡೆಸಿಕೊಂಡು ಹೋದರು’ ಎಂದು ಜರ್ನಿ ಬಗ್ಗೆ ಸುಮುಖ ಮೆಲುಕು ಹಾಕಿದರು.

ಹುಡುಕಾಟದ ಪಾತ್ರ: ಎಂಬಿಬಿಎಸ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರುವ ಸುಮುಖ ತಮ್ಮ ಪಾತ್ರದ ಬಗ್ಗೆ, ‘ಇಲ್ಲಿ ನಾನು ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದೇನೆ. ಆದರೆ, ನನ್ನಲ್ಲಿ ಒಂದಷ್ಟು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಾದಾಗ ನಾನು ಹುಡುಕಾಟಕ್ಕೆ ಮುಂದಾಗುತ್ತೇನೆ. ಇಡೀ ಕಥೆ ಒಂದು ಅಚ್ಚರಿ ಅನುಭವ ನೀಡುತ್ತದೆ. ಹಾಗಾಗಿ, ಇಡೀ ಸಿನಿಮಾವನ್ನು ಥಿಯೇಟರ್‌ನಲ್ಲೇ ಬಂದು ನೋಡಬೇಕು’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಆ್ಯಕ್ಟಿಂಗ್‌ಗೆ ಆದ್ಯತೆ: ಸುಮುಖ ನಟನೆ ಹಾಗೂ ನಿರ್ದೇಶನ ಎರಡು ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಇವರಿಗೆ ಆ್ಯಕ್ಟಿಂಗ್ ತುಂಬಾ ಇಷ್ಟ ಎನ್ನುವ ಅವರು, ‘ನಿರ್ದೇಶನ, ನಟನೆ ಎರಡು ಇಷ್ಟ. ಆದರೆ, ‘ಮನದ ಕಡಲು’ ಬಳಿಕ ನನಗೆ ಒಂದು ಆತ್ಮವಿಶ್ವಾಸ ಬಂದಿದೆ. ಹಾಗಾಗಿ, ನಾನು ಆ್ಯಕ್ಟಿಂಗ್‌ಗೆ ಹೆಚ್ಚು ಆದ್ಯತೆ ನೀಡಬೇಕು ಎಂದುಕೊಂಡಿದ್ದೇನೆ. ಈ ಸಿನಿಮಾದ ಬಳಿಕ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಗಮನಹರಿಸುವೆ. ಸದ್ಯ ನನ್ನ ಮನದಲ್ಲಿ ‘ಮನದ ಕಡಲು’ ತುಂಬಿದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net