

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿ ಸಖತ್ ಸಂಚಲನ ಮೂಡಿಸಿದ ಮಲಯಾಳಂ ಚಿತ್ರ ‘ಹೆಲೆನ್’ ಇದೀಗ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು, ಲಾಸ್ಯಾ ನಾಗರಾಜ್ ನಾಯಕಿ ಆಗಿ ನಟಿಸಲಿದ್ದಾರೆ. ‘ಫ್ರೈಡೇ ಫಿಲಮ್ಸ್’ ಹಾಗೂ ‘ಸಿಲ್ವರ್ ಟ್ರೇನ್ ಇಂಟರ್ನ್ಯಾಷನಲ್’ ಬ್ಯಾನರ್ನಲ್ಲಿ ಜಂಟಿಯಾಗಿ ನಿರ್ಮಾಣ ಆಗಲಿರುವ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಇಬ್ಬರು ಹೊಸ ನಿರ್ದೇಶಕರು ಪದಾರ್ಪಣೆ ಮಾಡಿದರೆ, ಜನಪ್ರಿಯ ನಿರ್ದೇಶಕರೊಬ್ಬರು ನಿರ್ವಪಕರಾಗಿಯೂ ಬಡ್ತಿ ಪಡೆದಿದ್ದಾರೆ.
ಕುಟ್ಟಿ ಕ್ಸೇವಿಯರ್ ನಿರ್ದೇಶನದಲ್ಲಿ ಅನ್ನಾ ಬೆನ್, ಲಾಲ್, ನೋಬೆಲ್ ಬಾಬು ಥಾಮಸ್ ಮುಂತಾದವರು ಅಭಿನಯಿಸಿರುವ ‘ಹೆಲೆನ್’ ಸಿನಿಮಾದ ಕನ್ನಡ ರಿಮೇಕ್ ಹಕ್ಕನ್ನು ‘ಮಮ್ಮಿ’ ಮತ್ತು ‘ದೇವಕಿ’ ಖ್ಯಾತಿಯ ನಿರ್ದೇಶಕ ಲೋಹಿತ್ ಪಡೆದುಕೊಂಡಿದ್ದು, ಅವರೇ ಚಿತ್ರ ನಿರ್ವಿುಸುತ್ತಿದ್ದಾರೆ. ಹಾಗಂತ ಅವರು ಈ ಚಿತ್ರಕ್ಕೆ ನಿರ್ದೇಶಕರಲ್ಲ. ಆಡ್ ಫಿಲಂ ಮೇಕರ್ಸ್ ಆಗಿರುವ ಎಂ. ಅರುಣ್ ಕುಮಾರ್ ಹಾಗೂ ಸಾಬು ಅಲೋಸಿಯಸ್ ಈ ಚಿತ್ರಕ್ಕೆ ಜಂಟಿಯಾಗಿ ಆಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಲಿದ್ದಾರೆ.
‘ಗೆಳೆಯ ಕಿಶೋರ್ ನರಸಿಂಹ ರೆಡ್ಡಿ ಹಾಗೂ ನಾನು ಸೇರಿ ‘ಫ್ರೈಡೇ ಫಿಲಮ್್ಸ’ ಎಂಬ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದೇವೆ. ನಮ್ಮ ಸಂಸ್ಥೆಯ ಮೊದಲ ಸಿನಿಮಾ ಸ್ವಮೇಕ್ ಆಗಿರಬೇಕು ಎಂದುಕೊಂಡಿದ್ದೆವು. ಆದರೆ ಈ ಮಧ್ಯೆ ‘ಹೆಲೆನ್’ ನೋಡಿದ ಮೇಲೆ ಅದನ್ನೇ ಮೊದಲ ಸಿನಿಮಾ ಆಗಿ ಮಾಡಬೇಕು ಅನಿಸಿತು. ತಂದೆ-ಮಗಳ ಸೆಂಟಿಮೆಂಟ್ ಇರುವ ಈ ಸಿನಿಮಾ ಅಷ್ಟೊಂದು ಚೆನ್ನಾಗಿದೆ’ ಎನ್ನುತ್ತಾ ‘ಹೆಲೆನ್’ ಕನ್ನಡ ರಿಮೇಕ್ಗೆ ಮುಂದಾದ ಬಗೆಯನ್ನು ವಿವರಿಸಿದರು ಲೋಹಿತ್.
‘ಆಹಾರ ಪದಾರ್ಥ ಇಡುವ ಫ್ರೀಜರ್ ರೂಮ್ಲ್ಲಿ ಯುವತಿಯೊಬ್ಬಳು ತನಗೆ ಗೊತ್ತಿಲ್ಲದೆಯೇ ಸಿಕ್ಕಿಹಾಕಿಕೊಳ್ಳುತ್ತಾಳೆ. ಅವಳು ಅಲ್ಲಿಂದ ತಪ್ಪಿಸಿಕೊಳ್ಳಲು ನಡೆಸುವ ಪರದಾಟ, ಅವಳಿಗಾಗಿ ಇತರರು ನಡೆಸುವ ಹುಡುಕಾಟವೇ ಕಥಾಹಂದರ’ ಎನ್ನುತ್ತಾರೆ ಲೋಹಿತ್. ಇನ್ನು ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಮಾತ್ರ ಆಗಿದ್ದು, ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಞರನ್ನು ಇನ್ನಷ್ಟೇ ಆರಿಸಬೇಕಿದೆ. ಸದ್ಯದಲ್ಲೇ ಪಾತ್ರವರ್ಗ-ತಾಂತ್ರಿಕ ವರ್ಗ ಅಂತಿಮಗೊಳಿಸಿ ಮಾರ್ಚ್ ಅಂತ್ಯದ ಸುಮಾರಿಗೆ ಶೂಟಿಂಗ್ ಆರಂಭಿಸುವ ಗುರಿ ಇರಿಸಿಕೊಂಡಿದೆ ಈ ಚಿತ್ರತಂಡ.