ಗಾಳಿಪಟ ಹಾರಿಸಲಿದ್ದಾರೆ ಸಂಯುಕ್ತಾ

Samyuktha
Published on

ಬೆಂಗಳೂರು: ಲಾಕ್​ಡೌನ್​ನಿಂದ ನಿಂತಿದ್ದ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಕಜಾಕಿಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದವರು ಕಳೆದ ಕೆಲವು ದಿನಗಳಿಂದ ಅಲ್ಲಿ ಬೀಡುಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಣೇಶ್, ದಿಗಂತ್ ಆಗಾಗ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಚಿತ್ರದಲ್ಲಿ ಮೂವರು ಹೀರೋಗಳು ಎಂದು ಎಲ್ಲರಿಗೂ ಗೊತ್ತೇ ಇದೆ. ಅವರಿಗೆ ಮೂವರು ನಾಯಕಿಯರೂ ಇರಲೇಬೇಕಲ್ಲ. ಶರ್ವಿುಳಾ ಮಾಂಡ್ರೆ ಒಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಆರಂಭದಿಂದಲೇ ಸುದ್ದಿಯಾಗಿತ್ತು. ಮಿಕ್ಕಿಬ್ಬರು ಯಾರು ಎಂಬ ವಿಷಯವನ್ನು ಚಿತ್ರತಂಡದವರು ಹೇಳಿಕೊಂಡಿರಲಿಲ್ಲ. ಶರಣ್ ಮತ್ತು ಚಿಕ್ಕಣ್ಣ ಅಭಿನಯದ ‘ರಾಜ್-ವಿಷ್ಣು’ ಚಿತ್ರದಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ಒಬ್ಬರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ವೈಭವಿ ಶಾಂಡಿಲ್ಯ ಹೆಸರು ಪಕ್ಕಾ ಆಗಿದ್ದು, ಅವರ ಜತೆಗೆ ಸಂಯುಕ್ತಾ ಮೆನನ್ ಸಹ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ಮಲಯಾಳಂ ಚಿತ್ರ ‘ಪಾಪ್​ಕಾರ್ನ್’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಸಂಯುಕ್ತಾ ಮೆನನ್. ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕಲರಿ’ ಚಿತ್ರದ ಮೂಲಕ ಕಾಲಿವುಡ್​ಗೆ

ಹೋಗಿದ್ದ ಸಂಯುಕ್ತಾ, ಇದೀಗ ‘ಗಾಳಿಪಟ 2’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಅವರು ಕಜಾಕಿಸ್ತಾನದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಎಲ್ಲ ಸರಿ, ಯಾರಿಗೆ ಯಾರು ಜೋಡಿ ಎಂಬ ಪ್ರಶ್ನೆ ಬಂದೇಬರುತ್ತದೆ. ಆದರೆ, ಯೋಗರಾಜ್ ಭಟ್ ಈ ವಿಷಯವನ್ನು ಬಹಿರಂಗಗೊಳಿಸಿಲ್ಲ. ಯಾರಿಗೆ ಯಾರು ಎಂದು ಹೇಳಿಬಿಟ್ಟಿರೆ, ಮಜ ಇರುವುದಿಲ್ಲ ಎಂದು ಸಸ್ಪೆನ್ಸ್ ಅಕೌಂಟ್​ನಲ್ಲೇ ಇಟ್ಟಿದ್ದಾರೆ. ಅಂದಹಾಗೆ, ಕಜಕಿಸ್ತಾನದಲ್ಲಿ ಇನ್ನೂ ಒಂದಿಷ್ಟು ದಿನಗಳ ಚಿತ್ರೀಕರಣ ಮುಂದುವರೆಯಲಿದ್ದು, ಮುಂದಿನ ತಿಂಗಳು ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net