ಮತ್ತೆ ಮಾಲಾಶ್ರೀ; ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ಡಾಕ್ಟರ್ ಪಾತ್ರ ...

Malashri
Published on

ಬೆಂಗಳೂರು: 2017ರಲ್ಲಿ ತೆರೆಗೆ ಬಂದಿದ್ದ ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ನಟನೆಯಿಂದ ಸುದೀರ್ಘವಾದ ಅಂತರವನ್ನು ಕಾಯ್ದುಕೊಂಡಿದ್ದರು ಮಾಲಾಶ್ರೀ. ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಳ್ಳುವ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಆ ಹೊಸ ಚಿತ್ರದಲ್ಲಿ ಡಾಕ್ಟರ್ ಆಗಿ ಮಾಲಾಶ್ರೀ ಕಾಣಿಸಿಕೊಳ್ಳಲಿದ್ದಾರೆ.

ಪಕ್ಕಾ ಕಮರ್ಷಿಯಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾದಲ್ಲಿ ಎರಡು ರೀತಿಯ ಶೇಡ್​ನಲ್ಲಿ ಮಾಲಾಶ್ರೀ ಕಾಣಿಸಿಕೊಳ್ಳಲಿದ್ದಾರೆ. 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಅದಾದ ಬಳಿಕ ವೈದ್ಯೆಯಾಗಿಯೂ ಅವರ ಪಾತ್ರ ಮೂಡಿಬರಲಿದೆ. ಲಾಕ್​ಡೌನ್​ನಲ್ಲಿ ಕಂಡ ನೈಜ ಘಟನೆಗಳನ್ನೇ ಪ್ರಧಾನವಾಗಿಸಿ ರವೀಂದ್ರ ವಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸ್ವರ್ಣಗಂಗ ಫಿಲಂಸ್ ಬ್ಯಾನರ್​ನಲ್ಲಿ ಬಿ.ಎಸ್. ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ವರ್ಧನ್ ನಾಯಕನಾಗಿ ನಟಿಸುತ್ತಿದ್ದು, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಸಾಧುಕೋಕಿಲ, ಮಂಜು ಪಾವಗಡ, ಕುರಿ ರಂಗ, ಅಶ್ವಿನ್ ಸೇರಿ ಹಲವರಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಯುಗಾದಿ ಬಳಿಕ ಎರಡನೇ ಹಂತದ ಶೂಟಿಂಗ್ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net