

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರು ಅಷ್ಟು ಬೇಗ ಎಲ್ಲರನ್ನು ಬಿಟ್ಟು ಹೋಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಕರೊನಾದಿಂದಾಗಿ ಏಪ್ರಿಲ್ 26ರಂದು ರಾಮು ಎಲ್ಲರನ್ನು ಬಿಟ್ಟು ಅಗಲಿದ್ದಾರೆ.
ತಮ್ಮ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ನಟಿ ಮಾಲಾಶ್ರೀ, ಇದೀಗ ಮೊದಲ ಬಾರಿಗೆ ಮಾತನಾಡಿದ್ದಾರೆ. ರಾಮು ಅವರ ನಿಧಾನಕ್ಕೆ ಸಂತಾಪ ವ್ಯಕ್ತಪಡಿಸುವುದರ ಜತೆಗೆ, ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಎಲ್ಲರ ಸಹಕಾರವನ್ನು ಅವರು ನೆನೆದಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಲಾಶ್ರೀ, ಕಳೆದ 12 ದಿನಗಳು ಅತ್ಯಂತ ನೋವಿನ ಸಮಯವಾಗಿತ್ತು. ರಾಮು ಅವರ ನಿಧನದಿಂದ ಇಡೀ ಕುಟುಂಬ ಜರ್ಝರಿತವಾಗಿತ್ತು. ರಾಮು ಯಾವತ್ತೂ ನಮ್ಮ ಬೆನ್ನೆಲುಬಾಗಿದ್ದರು, ನಮಗೆ ದಾರಿ ತೋರುವ ದೀಪವಾಗಿದ್ದರು. ಇಂಥ ಕಷ್ಟದ ಸಮಯದಲ್ಲಿ, ಚಿತ್ರರಂಗದ ಮಂದಿ, ಮಾಧ್ಯಮದವರು, ಸ್ನೇಹಿತರು ಮತ್ತು ರಾಮು ಅವರ ಅಭಿಮಾನಿಗಳು ತೋರಿಸಿದ ಪ್ರೀತಿಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅವರೆಲ್ಲರ ಪ್ರೀತಿ, ಅಭಿಮಾನ ಮತ್ತು ಪ್ರಾರ್ಥನೆಯೇ, ಈ ಕಷ್ಟದ ಸಮಯದಲ್ಲಿ ನಮಗೆ ಧೈರ್ಯ ತುಂಬಿದ್ದು. ನಮ್ಮ ಬೆನ್ನಿಗೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ರಾಮು ಅವರು ನಿಧನರಾದಾಗ, ಅವರ ಅಂತ್ಯಕ್ರಿಯೆಗೆ ಚಿತ್ರರಂಗದ ವತಿಯಿಂದ ಯಾರೂ ಹೋಗುವುದಕ್ಕೆ ಸಾಧ್ಯವಾಗದಿದ್ದರೂ ಎಲ್ಲರೂ ಸೋಷಿಯಲ್ ಮೀಡಿಯಾ ಮೂಲಕ ರಾಮು ಅವರಿಗೆ ಸಂತಾಪ ಸೂಚಿಸುವುದರ ಜತೆಗೆ ಅವರನ್ನು ನೆನಪಿಸಿಕೊಂಡಿದ್ದರು. ಶಿವರಾಜಕುಮಾರ್, ಜಗ್ಗೇಶ್, ಸುದೀಪ್, ದರ್ಶನ್, ಪುನೀತ್, ಗಣೇಶ್, ಶ್ರೀಮುರಳಿ ಸೇರಿದಂತೆ ಹಲವರು ರಾಮು ಅವರ ಆತ್ಮಕ್ಕೆ ಶಾಂತಿ ಕೋರಿದ್ದರು.