ತೌಕ್ತೆ ಚಂಡಮಾರುತಕ್ಕೆ ಮೈದಾನ್ ಚಿತ್ರದ ಸೆಟ್​ ಧ್ವಂಸ

Maidaan - Final
Published on

ಮುಂಬೈ: ತೌಕ್ತೆ ಚಂಡಮಾರುತದಿಂದ ಮುಂಬೈನಲ್ಲಿ ಹಲವು ಸೆಲೆಬ್ರಿಟಿಗಳಿಗೆ ಸಮಸ್ಯೆಯಾಗಿದೆ. ನಟಿ ರಾಖಿ ಸಾವಂತ್​ ಮನೆಗೆ ನೀರು ನುಗ್ಗಿ ಬಂದರೆ, ರಣಬೀರ್​ ಕಪೂರ್​ ಕಟ್ಟಿಸುತ್ತಿರುವ ಹೊಸ ಮನೆಯ ಎದುರು ಮರಗಳು ಬಿದ್ದು ಸಮಸ್ಯೆ ಎದುರಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅಜಯ್​ ದೇವಗನ್​ ಅಭಿನಯದ ಹೊಸ ಚಿತ್ರ ಮೈದಾನ್​ಗೆ ಹಾಕಲಾಗಿದ್ದ ಸೆಟ್​ಗಳು ಧ್ವಂಸವಾಗಿವೆ.

ಮೈದಾನ್​ ಚಿತ್ರಕ್ಕಾಗಿ ಮುಂಬೈನ ಹೊರವಲಯದಲ್ಲಿ ಸ್ಟೇಡಿಯಂನ ಬೃಹತ್​ ಸೆಟ್​ವೊಂದನ್ನು ಹಾಕಲಾಗಿತ್ತು. ಲಾಕ್​ಡೌನ್​ಗೂ ಮುನ್ನ ಅಲ್ಲಿ ಚಿತ್ರೀಕರಣ ಸಹ ಮಾಡಲಾಗಿತ್ತು. ಈಗ ತೌಕ್ತೆ ಚಂಡಮಾರುತದಿಂದ ಆ ಸೆಟ್​ನ ಕೆಲವು ಭಾಗಗಳು ಧ್ವಂಸವಾಗಿವೆ. ಸೆಟ್​ಗಳು ಹಾಳಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವುದೇ ಸಾವು-ನೋವುಗಳಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಮೈದಾನ್​ ಚಿತ್ರದ ಸೆಟ್​ಗಳಿಗೆ ಹೀಗೆ ಸಮಸ್ಯೆ ಆಗಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಇದೇ ಸಮಯಕ್ಕೆ, ಮೊದಲ ಲಾಕ್​ಡೌನ್​ ಆದಾಗ ಸೆಟ್​ಗಳನ್ನು ಉಪಯೋಗಿಸದೆ ಅದು ಹಾಳಾಗಿತ್ತು. ಕೊನೆಗೆ ಆ ಸೆಟ್​ಗಳನ್ನು ನಾಶ ಮಾಡಿ, ಇನ್ನೊಮ್ಮೆ ನಿರ್ಮಿಸಲಾಗಿತ್ತು. ಈಗ ನೋಡಿದರೆ, ಅದರಲ್ಲಿನ ಬಹುಪಾಲು ಚಂಡಮಾರುತದಿಂದ ಧ್ವಂಸವಾಗಿವೆ.

ಖ್ಯಾತ ಫುಟ್​ಬಾಲ್​ ಆಟಗಾರ ಸೈಯ್ಯದ್​ ಅಬ್ದುಲ್ ರಹೀಮ್​ ಅವರ ಬದುಕು ಮತ್ತು ಸಾಧನೆಯನ್ನಾಧರಿಸಿದ ಈ ಚಿತ್ರದಲ್ಲಿ ಅವರ ಪಾತ್ರವನ್ನು ಅಜಯ್​ ದೇವಗನ್​ ನಿರ್ವಹಿಸುತ್ತಿದ್ದಾರೆ. ಪ್ರಿಯಾಮಣಿ, ಗಜರಾಜ್​ ರಾವ್​ ಮುಂತಾದವರು ನಟಿಸಿರುವ ಈ ಚಿತ್ರವನ್ನು ಅಮಿತ್​ ಶರ್ಮಾ ನಿರ್ದೇಶಿಸು್​ತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಆಗಸ್ಟ್​ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗ ಚಿತ್ರ ಲಾಕ್​ಡೌನ್​ನಿಂದ ವಿಳಂಬವಾಗುತ್ತಿರುವುದರಿಂದ, ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net