Bili Chukki Halli Hakki Review; ಸಮಾಜದ ಹುಳುಕುಗಳ ಮೇಲೆ ಬೆಳಕು ಚೆಲ್ಲುವ ಚುಕ್ಕಿ-ಹಕ್ಕಿ

zsccas
Published on

ಚಿತ್ರ: ಬಿಳಿ ಚುಕ್ಕಿ ಬೆಳ್ಳಿ ಹಕ್ಕಿ

ನಿರ್ದೇಶನ: ಮಹೇಶ್​ ಗೌಡ

ತಾರಾಗಣ: ಮಹೇಶ್​ ಗೌಡ, ಕಾಜಲ್​ ಕುಂದರ್​, ಜಹಾಂಗೀರ್​, ಲಕ್ಷ್ಮೀ ಸಿದ್ದಯ್ಯ, ವೀಣಾ ಸುಂದರ್​, ರವಿ ಭಟ್​ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ವಿಟಿಲಿಗೋ ಅರ್ಥಾತ್​ ತೊನ್ನಿನ ಬಗ್ಗೆ ಈಗಲೂ ಹಲವು ಮೂಢನಂಬಿಕೆಗಳಿವೆ. ಅದು ಮಾಟ- ಮಂತ್ರಗಳಿಂದ ಬರುತ್ತದೆ, ಮುಟ್ಟಿದರೆ ಹರಡುತ್ತದೆ, ನಾಟಿ ಔಷಧಿಯಿಂದ ವಾಸಿಯಾಗುತ್ತದೆ ಅಂತೆಲ್ಲ ಈಗಲೂ ಜನ ನಂಬುತ್ತಾರೆ. ಹೀಗಾಗಿಯೇ ವಿಟಿಲಿಗೋ ಇರುವವರನ್ನು ನೋಡುವ ರೀತಿಯೇ ಬೇರೆ ಇರುತ್ತದೆ. ಈ ಹಿಂದೆ "ಮಹೀರಾ' ಎಂಬ ಚಿತ್ರವನ್ನು ನಿರ್ದೇಶಿಸಿರುವ ಮಹೇಶ್​ ಗೌಡ ಕೂಡ ಅವರಿಗೂ ವಿಟಿಲಿಗೋ ಇದ್ದು, ತಾವೇ ಖುದ್ದು ಎದುರಿಸಿದ ಸಮಸ್ಯೆಗಳ ಸುತ್ತ "ಬಿಳಿ ಚುಕ್ಕಿ ಬೆಳ್ಳಿ ಹಕ್ಕಿ' ಸಿನಿಮಾ ಮಾಡಿದ್ದಾರೆ. ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ.

ಆತ ಶಿವು (ಮಹೇಶ್​). 10ನೇ ವಯಸ್ಸಿನಲ್ಲಿ ಮೈಯಲ್ಲಿ ಕಾಣಿಸಿಕೊಳ್ಳುವ ಬಿಳಿ ಮಚ್ಚೆಗಳು, ಕ್ರಮೇಣ ಮೈಯೆಲ್ಲ ಹರಡುತ್ತವೆ. ಊರಿನ ಜನ ಅವನನ್ನು ಬಿಳಿ ಚುಕ್ಕಿ ಎಂದು ಕರೆಯತೊಡಗುತ್ತಾರೆ. ಶಾಲೆಗೆ ಓದಲು, ಮೈದಾನದಲ್ಲಿ ಆಡಲು ಹಿಂಜರಿಯತೊಡಗುತ್ತಾನೆ. ಅಮ್ಮ ಶಾಂತ (ಲಕ್ಷ್ಮೀ), ಮಾವ ರಂಗಣ್ಣ (ಜಹಾಂಗೀರ್​) ಸುತ್ತ ಆತನ ಜೀವನ ಸುತ್ತತೊಡಗುತ್ತದೆ. ವಯಸ್ಸು 30 ಆದರೂ, ಹುಡುಗಿಯರನ್ನು ಹುಡುಕುತ್ತಿದ್ದರೂ ವಿಟಿಲಿಗೋದಿಂದಾಗಿ ಆತನನ್ನು ಮದುವೆಯಾಗಲು ಯಾರೂ ಒಪ್ಪುತ್ತಿರುವುದಿಲ್ಲ. ಅದರ ನಡುವೆಯೇ ಊರ ಸುಂದರಿ ಕವಿತಾಗೂ (ಕಾಜಲ್​) ಅಪ್ಪ ವೀರಣ್ಣ (ರವಿ ಭಟ್​), ಅಮ್ಮ ಸುಶೀಲ (ವೀಣಾ) ಹುಡುಗನನ್ನು ಹುಡುಕುತ್ತಿರುತ್ತಾರೆ. ಅದೆಷ್ಟೋ ಜನ ಹುಡುಗರು ಬಂದರೂ, ಮದುವೆ ವಯಸ್ಸು ದಾಟುತ್ತಿದ್ದರೂ ಆಕೆ ಯಾರನ್ನೂ ಒಪ್ಪಿರುವುದಿಲ್ಲ. ಆದರೆ, ಶಿವನನ್ನು ನೋಡಿದಾಕ್ಷಣ ಮದುವೆಗೆ ಒಪ್ಪುತ್ತಾಳೆ. ಅಮ್ಮನ ವಿರೋಧದ ನಡುವೆಯೂ ಶಿವನನ್ನು ಮದುವೆಯಾಗುತ್ತಾಳೆ. ಇನ್ನು ನನ್ನ ಮದುವೆ ಆಗಲ್ಲ ಅಂತ ಕೈಚೆಲ್ಲಿ ಕುಳಿತಿದ್ದ ಶಿವನ ಬಾಳಲ್ಲಿ ಕವಿತಾ ಎಂಬ ಬೆಳಕು ಹರಿಯುತ್ತದೆ. ನಮ್ಮ ಸಂಸಾರ ಆನಂದ ಸಾಗರ ಎಂದು ಹಾಡುವ ಹೊತ್ತಿಗೆ ಈ "ಬಿಳಿ ಚುಕ್ಕಿ ಹಳ್ಳಿ ಹಕ್ಕಿ' ಬಾಳಲ್ಲಿ ಬಿರುಗಾಳಿ ಏಳುತ್ತದೆ. ಅಲ್ಲೊಂದು "ಚೆಲುವಿನ ಚಿತ್ತಾರ' ಟ್ವಿಸ್ಟ್​! ಹಾಗಾದರೆ, ಇವರ ನಡುವಿನ ಸಮಸ್ಯೆ ಏನು? ದೂರಾಗುತ್ತಾರಾ? ಒಂದಾಗುತ್ತಾರಾ? ಸಿನಿಮಾ ನೋಡಿ.

ಗೊರಕೆ, ಮರೆವು, ಬಿಕ್ಕಳಿಕೆ... ಹೀಗೆ ಹಲವು ದೇಹಾರೋಗ್ಯ ಪರಿಸ್ಥಿತಿಗಳ ಬಗ್ಗೆ ಸಿನಿಮಾ ಬಂದಿರುವಂತೆಯೇ ವಿಟಿಲಿಗೋ ಕುರಿತ ಕಥೆಯಿದು. ಇಂತಹ ಕಂಟೆಂಟ್​ ಪ್ರಧಾನ ಚಿತ್ರವನ್ನು, ಕಮರ್ಷಿಯಲ್​ ಆಗಿ ಹೇಳುವ ಕಷ್ಟದ ಕೆಲಸವನ್ನು ಮಹೇಶ್​ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಾಜಲ್​ ಮಾತು, ಮೌನ, ಕಣ್ಣೀರ ಜತೆಗೆ ಪ್ರತಿ ನೋಟದಲ್ಲೂ ನಯವಿದೆ, ಅಭಿನಯವಿದೆ. ಮೊದರ್ಲಧ ಜಹಾಂಗೀರ್​ ಚಿತ್ರದ ಕೇಂದ್ರಬಿಂದು ಎಂದರೂ ತಪ್ಪಲ್ಲ. "ಎದೆಯ ಒಳಗಡೆ' ಹಾಡು ಎದೆಯೊಳಗೆ ಇಳಿಯುತ್ತದೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಕೆಲವೆಡೆ ಲಿಂಕ್​ ಮಿಸ್​ ಆಗಿದೆ ಅಂತನ್ನಿಸುತ್ತದೆ. 138 ನಿಮಿಷಗಳ ಚಿತ್ರಕ್ಕೆ ಕೊಂಚ ಕತ್ತರಿ ಪ್ರಯೋಗ ಮಾಡುವ ಅವಕಾಶವಿತ್ತು. ಆದರೆ, ಕಥೆ ಸಾಗಿದಂತೆ ಅದೆಲ್ಲವನ್ನೂ ಮರೆಸುತ್ತದೆ. ಹೀಗಾಗಿ "ಬಿಳಿ ಚುಕ್ಕಿ ಹಳ್ಳಿ ಹಕ್ಕಿ' ಒಂದೊಳ್ಳೆ ಪ್ರಯತ್ನ ಎನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net