

ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ, ‘ಪುಷ್ಪ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಸಖತ್ ಹವಾ ಸೃಷ್ಟಿಸಿದ್ದು ಎಲ್ಲೆಡೆ ಚರ್ಚೆ ಆಗುತ್ತಿದೆ. ಆದರೆ, ಅಲ್ಲು ಅರ್ಜುನ್‌ಗೂ ಮುನ್ನ ಈ ಚಿತ್ರದಲ್ಲಿ ಮಹೇಶ್ ಬಾಬು ನಟಿಸಬೇಕಿತ್ತು ಎಂಬ ವಿಷಯ ಇದೀಗ ಸ್ಫೋಟಗೊಂಡಿದೆ.
ಹೌದು, ‘ಪುಷ್ಪ’ ಚಿತ್ರದಲ್ಲಿ ಮೊದಲು ಮಹೇಶ್ ಬಾಬು ನಟಿಸಬೇಕಿತ್ತಂತೆ. ಈ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಅವರ ಮೊದಲ ಆಯ್ಕೆ ಮಹೇಶ್ ಬಾಬು ಆಗಿತ್ತಂತೆ. ಸರಿ, ಸುಕುಮಾರ್ ಹೋಗಿ ಅವರಿಗೆ ಕಥೆ ಹೇಳಿದ್ದಾರೆ. ಕಥೆ ಕೇಳಿದ ಬಾಬು ಹೇಳಿದ್ದು ಏನು ಗೊತ್ತಾ? ನೋ ಅಂತ.
ಇಷ್ಟಕ್ಕೂ ಮಹೇಶ್ ಬಾಬು ಯಾಕೆ ಈ ಚಿತ್ರಕ್ಕೆ ನೋ ಎಂದರು ಎಂಬುದಕ್ಕೂ ಕಾರಣವಿದೆ. ಅದೇನೆಂದರೆ, ಚಿತ್ರದ ನಾಯಕ ಪುಷ್ಪರಾಜ್ ಪಾತ್ರದಲ್ಲಿ ನೆಗೆಟಿವ್ ಶೇಡ್ ಇತ್ತಂತೆ. ತಮ್ಮ ಪಾತ್ರ ಸಖತ್ ಪಾಸಿಟಿವ್ ಆಗಿರಬೇಕು ಎಂದು ಬಯಸುವ ಮಹೇಶ್ ಬಾಬು, ಅದೇ ಕಾರಣಕ್ಕೆ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಅವರು ಬಿಟ್ಟ ಪಾತ್ರ, ಆ ನಂತರ ಅಲ್ಲು ಅರ್ಜುನ್ ಅವರದ್ದಾಗಿದೆ.
ಬರೀ ‘ಪುಷ್ಪ’ ಮಾತ್ರವಲ್ಲ, ಈ ಹಿಂದೆ ತಮಿಳಿನಲ್ಲಿ ‘24’ ಎಂಬ ಚಿತ್ರ ಬಂತಲ್ಲ? ಆ ಚಿತ್ರದ ನಿರ್ದೇಶಕ ವಿಕ್ರಮ್ ಕುಮಾರ್ ಮೊದಲು ಕಥೆ ಹೇಳಿದ್ದೂ ಮಹೇಶ್ ಬಾಬು ಅವರಿಗೇನೇ. ಆದರೆ, ಪಾತ್ರ ನೆಗೆಟಿವ್ ಆಗಿವೆ ಮತ್ತು ತಮ್ಮ ಪಾತ್ರಕ್ಕೆ ಒಂದಿಷ್ಟು ಮೇಕ್‌ಓವರ್ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಚಿತ್ರವನ್ನು ತಿರಸ್ಕರಿಸಿದ್ದಾರೆ. ಅಂದಹಾಗೆ, ಮಹೇಶ್ ಬಾಬುಗೆ ಪಾತ್ರಕ್ಕಾಗಿ ಮೇಕ್‌ಓವರ್ ಮಾಡಿಕೊಳ್ಳುವುದಕ್ಕೂ ಇಷ್ಟವಿಲ್ಲವಂತೆ. ಜನ ತಮ್ಮನ್ನು ಗುರುತಿಸುವುದು ಸುಂದರ ಮತ್ತು ಸೌಮ್ಯ ಮುಖಕ್ಕಾಗಿ ಎಂಬುದು ಅವರ ನಂಬಿಕೆ. ಅದೇ ಕಾರಣಕ್ಕೆ, ಇಷ್ಟು ವರ್ಷಗಳಲ್ಲಿ ಅವರು ಯಾವ ಚಿತ್ರದಲ್ಲೂ ಬದಲಾವಣೆಯಾಗಿಲ್ಲ. ತಮ್ಮ ಮೊದಲ ಚಿತ್ರದಲ್ಲಿ ಹೇಗಿದ್ದರೋ, ಈಗ ಸಹ ಅದೇ ತರಹ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.