

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಶ್ರಾವಣ ಮಾಸ ಶುಭಕರವಾಗಿದೆ. ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿದ್ದ ಥಿಯೇಟರ್‌ಗಳು ಇಡೀ ಒಂದು ತಿಂಗಳಲ್ಲಿ ತುಂಬಿ ತುಳಿಕಾಡಿದವು. ಕನ್ನಡದ ‘ಸು ಫ್ರಮ್ ಸೋ’ ಹಾಗೂ ಪ್ಯಾನ್ ಇಂಡಿಯಾ ಆ್ಯನಿಮೇಷನ್ ‘ಮಹಾವತಾರ್ ನರಸಿಂಹ’ ಚಿತ್ರವು ಪ್ರೇಕ್ಷಕರನ್ನು ಸಿನಿಮಾ ಮಂದಿರಗಳಲ್ಲಿ ಹಿಡಿದು ಕೂರಿಸಿವೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿವೆ. ದೊಡ್ಡಮಟ್ಟದ ಪ್ರಚಾರವಿಲ್ಲದೆ ರಿಲೀಸ್ ಆಗಿದ್ದ ಈ ಚಿತ್ರಗಳು ಸದ್ಯ ಗೆಲುವಿನ ನಗೆ ಬೀರಿದ್ದು, ಗಳಿಕೆ ಹಾಗೂ ಟಿಕೆಟ್ ಮಾರಾಟದಲ್ಲಿ ದಾಖಲೆ ನಿರ್ಮಿಸಿವೆ.
ಕನ್ನಡದ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಹಾಗೂ ಆಶ್ವಿನ್‌ಕುಮಾರ್ ನಿರ್ದೇಶನದ ಆ್ಯನಿಮೇಷನ್ ಚಿತ್ರ ‘ಮಹಾವತಾರ್ ನರಸಿಂಹ’ನ ಪರಾಕ್ರಮ ದೇಶವಲ್ಲದೇ, ವಿದೇಶದಲ್ಲೂ ಮುಂದುವರಿದಿದೆ. ಜುಲೈ 25ರಂದು ಕನ್ನಡ ಸೇರಿ ಪ್ಯಾನ್ ಇಂಡಿಯಾವಾಗಿ ರಿಲೀಸ್ ಆಗಿದ್ದ ಈ ಚಿತ್ರವು ದಿನದಿಂದ ದಿನಕ್ಕೆ ಗಳಿಕೆಯಲ್ಲಿ ದಾಖಲೆ ಬರೆಯುತ್ತಿದೆ. ರಿಲೀಸ್ ಆದ 18 ದಿನಕ್ಕೆ ವಿಶ್ವಾದ್ಯಂತ 210 ಕೋಟಿ ರೂಪಾಯಿ ಗಳಿಕೆ ಮಾಡಿರುವುದಾಗಿ ತಂಡ ಘೋಷಿಸಿದೆ. ಕಳೆದ ಶನಿವಾರ (ಅ.9) ಒಂದೇ ದಿನ ವಿಶ್ವಾದ್ಯಂತ 25 ಕೋಟಿ ರೂ. ಗಳಿಸಿದ್ದು, ಅದೇ ದಿನ 5.87 ಲಕ್ಷ ಟಿಕೆಟ್ ಮಾರಾಟವಾಗಿದೆ. ಈ ಮೂಲಕ ‘ಮಹಾವತಾರ ನರಸಿಂಹ’ 100 ಕೋಟಿ ರೂ. ಕ್ಲಬ್‌ಗೆ ಸೇರಿದ ಮೊದಲ ಭಾರತೀಯ ಆ್ಯನಿಮೇಟೆಡ್ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ. ಅಲ್ಲದೇ, ಈ ವರ್ಷದ ಅತಿಹೆಚ್ಚು ಗಳಿಕೆ ಮಾಡಿದ 6ನೇ ಭಾರತೀಯ ಚಿತ್ರ ಇದಾಗಿದೆ. ‘ಛಾವಾ’, ‘ಸಯ್ಯರ’, ‘ಎಲ್ 2: ಎಂಪುರಾನ್’, ‘ಸಂಕ್ರಾಂತಿಕಿ ವಸ್ತುನ್ನಾಂ’ ಹಾಗೂ ‘ತುಡರಮ್’ ಮೊದಲ ಐದು ಸ್ಥಾನದಲ್ಲಿವೆ.
ರಾಜ್ ಬಿ.ಶೆಟ್ಟಿ ನಿರ್ಮಾಣದ ಹಾಗೂ ಜೆ.ಪಿ.ತುಮಿನಾಡು ನಟಿಸಿ, ನಿರ್ದೇಶಿಸಿರುವ ಕಾಮಿಡಿ ಸಿನಿಮಾ ‘ಸು ಫ್ರಮ್ ಸೋ’ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುತ್ತಿದೆ. ಕಳೆದ ಜುಲೈ 25ಕ್ಕೆ ರಿಲೀಸ್ ಆಗಿದ್ದ ಈ ಚಿತ್ರವೂ ಕೂಡ ದಾಖಲೆ ನಿರ್ಮಿಸುತ್ತಿದೆ. 18ನೇ ದಿನಕ್ಕೆ 80 ಕೋಟಿ ರೂಪಾಯಿ ಗಳಿಕೆ ಮಾಡಿ, ನೂರು ಕೋಟಿ ಕ್ಲಬ್‌ನತ್ತ ದಾಪುಗಾಲಿಡುತ್ತಿದೆ. ಕೇವಲ 4.5 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರವು ದಾಖಲೆ ಮಟ್ಟದ ಗಳಿಕೆ ಮಾಡಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಬಳಿಕ ಮಲಯಾಳಂ, ತೆಲುಗಿನಲ್ಲಿ ಡಬ್ ಆಗಿ ಅಲ್ಲಿನ ಪ್ರೇಕ್ಷಕರನ್ನು ಸೆಳೆದಿತ್ತು. ಈ ವರ್ಷದ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ಮೂರನೇ ವಾರದ ವಿಕೇಂಡ್‌ನಲ್ಲಿ ‘ಸು ಫ್ರಮ್ ಸೋ’ ಚಿತ್ರವು 12.50 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.