ಇಂದಿಗೂ ಸರಿಸಾಟಿಯಿಲ್ಲ ಈಕೆಯ ಸೌಂದರ್ಯಕ್ಕೆ! ಶೀಘ್ರದಲ್ಲೇ ತೆರೆಗೆ ಬರಲಿದೆ ಮಧುಬಾಲಾ ಬಯೋಪಿಕ್​

Madhubala
Published on

ಮುಂಬೈ: ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಆ ಕಾಲಕ್ಕೇ ಹಿಂದಿ ಸಿನಿಮಾವನ್ನು ಆಳಿದ ನಟಿ ಮಧುಬಾಲಾ ಕುರಿತ ಜೀವನಾಧಾರಿತ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

ಹಲವು ಸುಂದರಿಗಳು ಬಂದು ಹೋದರೂ ಇಂದಿಗೂ ಮಧುಬಾಲಾ ಸೌಂದರ್ಯವನ್ನು ಮೀರಿಸುವ ಸೌಂದರ್ಯ ಇಲ್ಲ ಎಂದೇ ಹೇಳುತ್ತಾರೆ. ಇದು ನಿಜವೂ ಇರಬಹುದು. ಆಕೆ ಇದ್ದದ್ದೂ ಕೂಡ ಹಾಗೆಯೇ ಎಂದು ಮಧುಬಾಲಾಳನ್ನು ಹತ್ತಿರದಿಂದ ನೋಡಿದವರು ಇಂದಿಗೂ ಹೇಳುವ ಮಾತಿದು.

ಅತಿ ಕಡಿಮೆ ವಯಸ್ಸಿನಲ್ಲೇ ಸಾಧನೆಯ ಉತ್ತುಂಗದಲ್ಲಿರುವಾಗಲೇ ವಿಧಿಯಾಟಕ್ಕೆ ಜೀವನವನ್ನೇ ಅಂತ್ಯಗೊಳಿಸಿದ ಈ ಸುಂದರಿಯ ಬಯೋಪಿಕ್​ ಸದ್ಯದಲ್ಲೇ ಕಣ್ತುಂಬಿಕೊಳ್ಳಬಹುದು. 1969ರಲ್ಲಿ ತನ್ನ 36ನೇ ವಯಸ್ಸಿಗೆ ಕಾಯಿಲೆಗೆ ತುತ್ತಾಗಿ ಮಧುಬಾಲಾ ಕೊನೆಯುಸಿರೆಳೆಯುತ್ತಾರೆ. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ದುರಂತ ನಾಯಕಿಯ ಬದುಕನ್ನು ಈಗ ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳಬಹುದು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಧುಬಾಲಾ ಸಹೋದರಿ ಮಧುರ್​ ಬ್ರಿಜ್​ ಭೂಷಣ್, ​ಹಲವು ವರ್ಷಗಳ ನನ್ನ ಕನಸು ಈಗ ಈಡೇರುತ್ತಿದೆ. ತನ್ನ ಜೀವನದ ಅಲ್ಪಾವಧಿಯಲ್ಲೇ ಮಹತ್ವಪೂರ್ಣ ಜೀವನ ನಡೆಸಿದ ನನ್ನ ಪ್ರೀತಿಯ ಸಹೋದರಿಗಾಗಿ ಏನನ್ನಾದರೂ ಮಾಡಬೇಕೆಂದು ಅಂದುಕೊಂಡಿದ್ದೆ, ಇದಕ್ಕಾಗಿ ನನ್ನ ಸಹೋದರಿಯರೂ ಕೈ ಜೋಡಿಸಿದ್ದಾರೆ ಎಂದು ಹೇಳಿದ್ದಾರೆ.

1952ರಲ್ಲೇ ಅಮೆರಿಕದ ನಿಯತಕಾಲಿಕೆಯಲ್ಲಿ ವಿಶ್ವದ ಅತಿದೊಡ್ಡ ನಕ್ಷತ್ರ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿತ್ತು. ಆ ಕಾಲದಲ್ಲೇ ಅಷ್ಟು ಮಟ್ಟದ ಸಾಧನೆಯಾಗಿತ್ತು. 2019ರಲ್ಲೇ ಮಧುಬಾಲಾ ಕುರಿತ ಜೀವನಾಧಾರಿತ ಚಿತ್ರ ಮಾಡಲು ಪ್ರಯತ್ನಿಸಲಾಗಿತ್ತು. ಆಗ ಹಿರಿಯ ಸಹೋದರಿಯಿಂದ ಆಕ್ಷೇಪಣೆ ಬಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಈಗ ಎಲ್ಲರ ಸಮ್ಮತಿಯೂ ಇದೆ ಎಂದು ಬ್ರಿಜ್​ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net