

ಹುಬ್ಬಳ್ಳಿಯಲ್ಲಿ ಜನಿಸಿ, ಗುಲಬರ್ಗಾ ಹಾಗೂ ಮೈಸೂರು ವಿವಿಯಲ್ಲಿ ಪದವಿ ಪಡೆದು ಬಳಿಕ ತೆಲುಗು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡವರು ನಟಿ ಮಾಧವಿ ಲತಾ. ತೆಲುಗಿನ ‘ಅತಿಥಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ‘ನಚ್ಚವುಲೇ’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಬಳಿಕ ‘ಸ್ನೇಹಿತುಡು’, ‘ಅರವಿಂದ-2’ ಹಾಗೂ ತಮಿಳಿನ ‘ಅಂಬುಲ’ ಸೇರಿ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರ ನಡುವೆಯೇ 2019ರಲ್ಲಿ ರಾಜಕೀಯ ಪ್ರವೇಶಿಸಿ, ಗುಂಟೂರು ಪಶ್ಚಿಮ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಧವಿ ಲತಾ ಸೋತಿದ್ದರು. ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರು, ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಶೋಷಣೆಯ ಬಗ್ಗೆ ಆಗಾಗ ಧ್ವನಿ ಎತ್ತುತ್ತಿರುತ್ತಾರೆ. ತಮ್ಮ ಹಾಗೂ ನಟಿಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ರಾಜಕಾರಣಿ ಪ್ರಭಾಕರ್ ರೆಡ್ಡಿ ವಿರುದ್ಧ ನಟಿ ಮಾಧವಿ ಲತಾ ತಿರುಗಿಬಿದ್ದಿದ್ದು, ತೆಲುಗು ಚಲನಚಿತ್ರ ಕಲಾವಿದರ ಸಂಘ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ‘ಮಹಿಳೆಯರ ಸಂರಕ್ಷಣೆ ಬಗ್ಗೆ ಮಾತನಾಡಿದ್ದಕ್ಕೆ ತಾಡಿಪತ್ರಿ ನಗರಸಭೆ ಅಧ್ಯಕ್ಷ ಜೆ.ಸಿ.ಪ್ರಭಾಕರ್ ರೆಡ್ಡಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೇ ಕೆಲಸವಿಲ್ಲದ ನಟಿಯರನ್ನು ವೇಶ್ಯೆಯರಿಗೆ ಹೋಲಿಸಿ ಮಾತನಾಡಿರುವುದು ಖಂಡನೀಯ. ನಾನೀಗ ಸಿನಿಮಾ ಮಾಡುತ್ತಿಲ್ಲ ಬದಲಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೂ, ಉದ್ದೇಶಪೂರ್ವಕವಾಗಿಯೇ ನನ್ನ ಹೆಸರು ಎಳೆದು ತಂದು ಅಸಹ್ಯವಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಕಲಾವಿದರ ಸಂಘದ ಶಿವ ಬಾಲಾಜಿ ಹಾಗೂ ಮಾದಲಾ ರವಿ ನಟಿಯ ಬೆಂಬಲಕ್ಕೆ ನಿಂತಿದ್ದು,ಸಂಘದ ಅಧ್ಯಕ್ಷ ವಿಷ್ಣು ಮಂಚು ಕೂಡಲೇ ಕ್ರಮಕ್ಕೆ ವಹಿಸುದಾಗಿ ಭರವಸೆ ನೀಡಿದ್ದಾರೆ ಎಂದು ಮಾಧವಿ ಲತಾ ತಿಳಿಸಿದ್ದಾರೆ. -ಏಜೆನ್ಸೀಸ್