ಮೇಡ್ ಇನ್ ಬೆಂಗಳೂರು: ಒಂದೇ ಊರು, ಲಕ್ಷ ಕನಸುಗಳು

Ananth
Published on

ಬೆಂಗಳೂರು: ಬೆಂಗಳೂರನ್ನು ಹಿನ್ನೆಲೆಯಾಗಿಟ್ಟುಕೊಂಡು ಹಲವು ಚಿತ್ರಗಳು ನಿರ್ಮಾಣವಾಗಿವೆ. ಇದೀಗ ಪ್ರದೀಪ್​ ಶಾಸ್ತ್ರಿ, ಮತ್ತದೇ ಬೆಂಗಳೂರನ್ನು ಹಿನ್ನೆಲೆಯಾಗಿಟ್ಟುಕೊಂಡು, ‘ಮೇಡ್ ಇನ್ ಬೆಂಗಳೂರು’ ಎಂಬ ಚಿತ್ರ ಮಾಡಿದ್ದಾರೆ. ಹಲವು ಕನಸುಗಳನ್ನು ಹೊತ್ತು ಈ ಮಹಾನಗರಿಗೆ ಬರುವ ಮೂವರು ಯುವಕರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣವಾಗಿದ್ದು, ಶುಕ್ರವಾರ ಶೀರ್ಷಿಕೆ ಬಿಡುಗಡೆಯಾಗಿದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಯಿಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಮಿಕ್ಕಂತೆ ಮಧುಸೂಧನ್ ಗೋವಿಂದ್, ಪುನೀತ್ ಮಾಂಜ ಮತ್ತು ವಂಶಿಧರ್ ಕನಸುಗಳನ್ನು ಬೆನ್ನತ್ತಿ ಬರುವ ಯುವಕರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಜನಿ ಥರ್ಸ್​ಡೇ ಸ್ಟೋರೀಸ್ ಬ್ಯಾನರ್​ನಡಿ ಬಾಲಕೃಷ್ಣ ನಿರ್ವಿುಸಿದ್ದಾರೆ.

ಅನಂತ್ ನಾಗ್ ಅವರು ಈ ಚಿತ್ರದಲ್ಲಿ ಹೀರಾ ನಂದಾನಿ ಎಂಬ ಸಿಂಧಿ ವ್ಯಾಪಾರಿಯ ಪಾತ್ರ ಮಾಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, ‘ಪ್ರದೀಪ್​ ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ. ನನಗೆ ಒಬ್ಬ ಸಿಂಧಿ ವ್ಯಾಪಾರಿಯ ಪರಿಚಯವಿತ್ತು. ಅದು ಬೇರೆ ಯಾರೂ ಅಲ್ಲ, ಖ್ಯಾತ ನಿರ್ವಪಕ ಮತ್ತು ವಿತರಕ ಪಾಲ್ ಚಂದಾನಿ. ನನ್ನ ಅದೆಷ್ಟೋ ಚಿತ್ರಗಳ ವಿತರಣೆ ಮಾಡಿದ್ದಾರೆ ಅವರು. ಅವರನ್ನು ಹತ್ತಿರದಿಂದ ನೋಡಿದ್ದೆನಾದ್ದರಿಂದ ಅವರ ಮ್ಯಾನರಿಸಂ ಬಳಸಿಕೊಳ್ಳಬಹುದಾ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಒಪ್ಪಿದರು. ಅವರ ಮಾತಿನ ಧಾಟಿ ಮತ್ತು ಮ್ಯಾನರಸಿಂಗಳನ್ನು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಂಡಿದ್ದೇನೆ. ಇದೊಂದು ವಿಭಿನ್ನವಾದ ಪಾತ್ರ’ ಎನ್ನುತ್ತಾರೆ.

ಸಾಯಿಕುಮಾರ್ ಅವರು ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಅನಂತ್ ನಾಗ್ ಮತ್ತು ಪ್ರಕಾಶ್ ಬೆಳವಾಡಿಯಂತೆ. ‘ಈ ಚಿತ್ರದಲ್ಲಿ ಅವರಿಬ್ಬರ ಜತೆಗೆ ನಟಿಸುವುದಕ್ಕೆ ಅವಕಾಶವಿಲ್ಲದಿದ್ದರೂ, ಅವರಿಬ್ಬರೂ ನಟಿಸಿರುವ ಚಿತ್ರದಲ್ಲಿ ನಾನೂ ಇದ್ದೇನೆ ಎನ್ನುವುದು ಖುಷಿ. ಇಲ್ಲಿ ನನಗೆ ಸಂಭಾಷಣೆ ಕಡಿಮೆ. ಎಕ್ಸ್​ಪ್ರೆಶನ್​ಗಳು ಜಾಸ್ತಿ. ಬರೀ ಭಾವನೆಗಳ ಮೂಲಕ ಅಭಿವ್ಯಕ್ತಿ ಮಾಡುವಂತಹ ಪಾತ್ರ ನನ್ನದು’ ಎನ್ನುತ್ತಾರೆ ಸಾಯಿಕುಮಾರ್. ಚಿತ್ರಕ್ಕೆ ಅಶ್ವಿನ್ ಪಿ. ಕುಮಾರ್ ಅವರ ಸಂಗೀತ ಮತ್ತು ಭಜರಂಗ್ ಕೊಣತಮ್ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net