‘ಲವ್ ಯು’ ರೇಷ್ಮಾ: ನಿರ್ದೇಶಕಿಯಾಗಲು ಬಂದು ನಾಯಕನಟಿಯಾದ ಹಾಸನದ ಹುಡುಗಿ

love u muudu
Published on

ಬೆಂಗಳೂರು: ಬದುಕು ಕೆಲವೊಮ್ಮೆ ಅನಿರೀಕ್ಷಿತಗಳಿಗೆ ಸಾಕ್ಷಿಯಾಗಿಬಿಡುತ್ತದೆ. ಯಾವುದೋ ಸಣ್ಣ ಆಸೆ ಇಟ್ಟುಕೊಂಡು ಬಂದರೆ, ಕೆಲವೊಮ್ಮೆ ಸುವರ್ಣ ಅವಕಾಶದ ಬಾಗಿಲು ತೆರೆದುಬಿಡುತ್ತದೆ. ಈ ರೀತಿಯ ಅನಿರೀಕ್ಷಿತ ತಿರುವುಗಳು ಅನೇಕರ ಬದುಕಿನಲ್ಲಿ ಆಗಿದೆ. ಹಾಗೆಯೇ ಹಾಸನ ಮೂಲದ ರೇಷ್ಮಾ ಲಿಂಗರಾಜಪ್ಪ ಕೂಡ ನಿರ್ದೇಶಕಿಯಾಗಬೇಕು ಎಂದು ಚಿತ್ರರಂಗಕ್ಕೆ ಬಂದವರು. ಆದರೆ, ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೀರೋಯಿನ್ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಎರಡು-ಮೂರು ಚಿತ್ರಗಳು ರಿಲೀಸ್ ಸಿದ್ಧವಾಗಿವೆ. ಕುಮಾರ್ ನಿರ್ದೇಶನದ ಹಾಗೂ ಸಿದ್ದು ಮೂಲಿಮನಿಗೆ ಜೋಡಿಯಾಗಿರುವ ‘ಲವ್ ಯು ಮುದ್ದು’ ಇದೇ 7ರಂದು ಬಿಡುಗಡೆಯಾಗುತ್ತಿದೆ. ‘ನಾನು ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಈ ಮೊದಲು ಕಿರುಚಿತ್ರವನ್ನು ನಿರ್ದೇಶಿಸಿದ್ದೆ. ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಎಂದುಕೊಂಡವಳು, ಅನಿರೀಕ್ಷಿತವಾಗಿ ಕ್ಯಾಮರಾ ಫೇಸ್ ಮಾಡುವಂತಾಯಿತು. ‘ಲವ್ ಯು ಮುದ್ದು’ ಆಡಿಷನ್ಸ್ ಬಗ್ಗೆ ಮ್ಯಾನೇಜರ್‌ರೊಬ್ಬರು ಮಾಹಿತಿ ನೀಡಿದರು. ಅದಕ್ಕೂ ಮುನ್ನ ನಿರ್ದೇಶಕ ಕುಮಾರ್ ನನ್ನ ಫೋಟೋಸ್‌ಗಳನ್ನು ತರಿಸಿಕೊಂಡು ನೋಡಿದ್ದರಂತೆ. ಆಡಿಷನ್ಸ್‌ಗೆ ಕೂಡ ಸೀರೆ ಧರಿಸಿಯೇ ಹೋಗಿದ್ದೆ. ಈ ಪಾತ್ರಕ್ಕೆ ನಾನೇ ಸೂಕ್ತ ಎಂದು ಆಯ್ಕೆ ಮಾಡಿದರು. ಇಷ್ಟೆಲ್ಲ ನಡೆದಿದ್ದು, ಚಿತ್ರದ ಮುಹೂರ್ತದ ಹಿಂದಿನ ದಿನ. ಮರುದಿನವೇ ಚಿತ್ರದ ಶೂಟಿಂಗ್. ಅದಕ್ಕೂ ಮುನ್ನ ಪಾತ್ರಕ್ಕೆ ಬೇಕಾದ ಔಟ್‌ಫುಟ್, ಫೋಟೋಸ್ ಎಲ್ಲವನ್ನು ಟೀಂ ಸಿದ್ಧಪಡಿಸಿಕೊಂಡು ನನಗೆ ನೀಡಿತು. ಇದರಿಂದ ಪಾತ್ರ ನಿರ್ವಹಣೆ ಕಷ್ಟ ಅನಿಸಲಿಲ್ಲ. ಬಳಿಕ ನಾನು ಮತ್ತು ಸಿದ್ದು 15-20 ದಿನಗಳ ವರ್ಕ್‌ಶಾಪ್ ಮಾಡಿದೆವು’ ಎಂದು ರೇಷ್ಮಾ ಮಾಹಿತಿ ನೀಡುತ್ತಾರೆ.

ಕಣ್ಣೀರು ಹಾಕಲು ಗ್ಲಿಸರಿನ್ ಬಳಸಿಲ್ಲ

‘ಲವ್ ಯು ಮುದ್ದು’ ಚಿತ್ರದಲ್ಲಿ ರೇಷ್ಮಾ, ಸುಮತಿ ಎಂಬ ಪಾತ್ರದಲ್ಲಿದ್ದಾರೆ. ‘ಪ್ರೀತಿ ಮಾಡಲು ಭಯಪಡುವ ಶಾಲಾ ಶಿಕ್ಷಕಿಯೊಬ್ಬಳ ಬದುಕೇ ಪ್ರೀತಿಯಿಂದ ಸವಾಲುಗಳನ್ನು ಎದುರಿಸುವಂತಾಗುತ್ತದೆ. ಚಿತ್ರೀಕರಣ ಆರಂಭದಲ್ಲಿ ಅಳಲು ತುಂಬಾ ಕಷ್ಟಪಡುತ್ತಿದ್ದೆ. ಗ್ಲಿಸರಿನ್ ಬಳಸೋಣ ಎಂದರೆ, ನನ್ನ ಕಣ್ಣುಗಳಿಗೆ ಅದು ಆಗಿಬರಲಿಲ್ಲ. ಇಡೀ ಶೂಟಿಂಗ್ ಸಮಯದಲ್ಲಿ ಒಂದೇ ಬಾರಿ ಗ್ಲಿಸರಿನ್ ಬಳಸಿದ್ದು. ಈ ಚಿತ್ರದ ನೈಜ ಪಾತ್ರಗಳನ್ನು ಶೂಟಿಂಗ್ ಮುಗಿದ ಬಳಿಕ ಭೇಟಿ ಮಾಡಿದ್ದೆವು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ರೇಷ್ಮಾ. ಸದ್ಯ ಅವರು ನಿರ್ದೇಶನದ ‘ಕಟ್ಟಾರ’ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ‘ದೊಡ್ಡ ಮನುಷ್ಯ’ ಹಾಗೂ ‘ಸೈಕಿಕ್’ ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net