

ಅಂದು ಡಿ. 13. ನನ್ನ ಫೋನ್ ರಿಂಗಣಿಸಿತು. ಹೊಸ ನಂಬರ್. ನಮ್ಮ ಗುಂಪಿನಲ್ಲಿದ್ದ ಯಾವುದೇ ಹುಡುಗಿಯರಿಗೆ ಅಪರಿಚಿತ ನಂಬರ್ನಿಂದ ಫೋನ್ ಬಂದರೆ ಅವರನ್ನು ಕಿಚಾಯಿಸಿ, ಮಜಾ ತೆಗೆದುಕೊಳ್ಳುತ್ತಿದ್ದೆವು. ಅಂಥದೇ ಯಾವುದೋ ಬಕ್ರಾ ಅಂತ ಸಂತಸದಿಂದ ಫೋನ್ ರಿಸೀವ್ ಮಾಡಿದೆ. ಆ ಕಡೆಯಿಂದ ‘ಹಲೋ ನಾನು ಸಂತೋಷಕುಮಾರ ಹೊಸಹಟ್ಟಿ’ ಎಂದರು. ಅದು ಪಕ್ಕದ ಊರಾದ್ದರಿಂದ ಸ್ವಲ್ಪ ಎಚ್ಚರದಿಂದಲೇ ಮಾತನಾಡಿದೆ. ನನ್ನ ಬಗ್ಗೆ ವಿಚಾರಿಸಿದರು. ನಂತರ ಫೋನ್ ಕಟ್. ಬಳಿಕವೂ ದಿನಕ್ಕೊಮ್ಮೆಮಾತಾಡುತ್ತಿದ್ದೆವು. ಕ್ರಮೇಣ ದಿನಕ್ಕೆ 5-6 ಗಂಟೆ ಮಾತಾಡುತ್ತಿದ್ದೆವು. ಫೆ. 5 ರಂದು ‘ನೀನಂದ್ರೆ ನಂಗಿಷ್ಟ, ನನ್ನ ಮದುವೆ ಆಗ್ತೀಯಾ’ ಎಂದರು. ಮನಸ್ಸಲ್ಲಿ ಏನೋ ತಲ್ಲಣ. ಪ್ರೀತಿ ಮಾಡುವುದು ತಪ್ಪು ಎಂಬ ಮನೋಭಾವ ಇತ್ತು. 4 ದಿನಗಳ ನಂತರ ಪೋನ್ ಮಾಡಿ, ಮನಸ್ಸಿನಲ್ಲಿದ್ದ ಗೊಂದಲವನ್ನೆಲ್ಲ ಹೇಳಿ, ‘ನನಗೆ 3 ತಿಂಗಳ ಕಾಲಾವಕಾಶ ಬೇಕು’ ಎಂದೆ. ‘ಒಪ್ಪಿಗೆಯಾದರೆ ಫೋನ್ ಮಾಡು, ಅಲ್ಲಿವರೆಗೂ ಕಾಯುತ್ತೇನೆ, ನಿನ್ನ ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲ್ಲ’ ಎಂದು ಕಟ್ ಮಾಡಿದರು. ಅವರನ್ನು ನಾನು ಒಮ್ಮೆಯೂ ನೋಡಿರಲಿಲ್ಲ. ಭೇಟಿಯ ಇಂಗಿತ ವ್ಯಕ್ತಪಡಿಸಿದೆ. ಸಮ್ಮತಿಸಿದರು. ಒಂದೆರಡು ದಿನ ಕಳೆದ ನಂತರ ನಮ್ಮೂರಿನ ರಸ್ತೆಯಲ್ಲಿ ಭೇಟಿಯಾದೆವು. ಒಂದೆರಡು ಭೇಟಿಯ ನಂತರ ಫೆ. 12ರಂದು ಪತ್ನಿಯಾಗಲು ಸಮ್ಮತಿಸಿದೆ. ಅವರು ನನಗೆ ಪುಟ್ಟ, ನಾನು ಅವರಿಗೆ ಸಂತು ಎಂದು ಕರೆಯುವುದು ರೂಢಿ. 2018ರ ಅಕ್ಟೋಬರ್ 14 ರಂದು ಶಾಸ್ತ್ರೋಕ್ತವಾಗಿ ವಿವಾಹವಾಯಿತು. ಈಗಲೂ ನಮ್ಮ ಪ್ರೀತಿ ತಾಜಾತಾಜಾ. ಒಬ್ಬರಿಗಾಗಿ ಮತ್ತೊಬ್ಬರ ತ್ಯಾಗ, ಸಹನೆ, ಪ್ರೀತಿ, ಕಾಳಜಿ ಹಾಗೇ ಇದೆ.
ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ... ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.
| ಶ್ವೇತಾ ಸಂತೋಷಕುಮಾರ್ ಹೊಸಹಟ್ಟಿ, ಚಿತ್ರದುರ್ಗ ಜಿಲ್ಲೆ