

ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ... ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.
‘ವಿಜಯವಾಣಿ’ಯಲ್ಲಿ ಪ್ರೇಮಿಗಳ ದಿನದ ಜಾಹೀರಾತು ನೋಡಿದ ತಕ್ಷಣ ನನ್ನ ಮನಸ್ಸು 12 ವರ್ಷಗಳ ಹಿಂದಕ್ಕೆ ಜಾರಿತು. ಅದು ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯ. ಕೆಮಿಸ್ಟ್ರಿ ಪರೀಕ್ಷೆ ಬರೆದು ಹೊರಬಂದೆ. ಅಂದು ಒಬ್ಬ ಹುಡುಗ ನನ್ನನ್ನು ಗಮನಿಸಿದ್ದನಂತೆ. ನಾನು ಅವನನ್ನು ಗಮನಿಸಿರಲಿಲ್ಲ. ಕೊನೆಯ ಸಬ್ಜೆಕ್ಟ್ ಪರೀಕ್ಷೆ ಮುಗಿದ ದಿನ ಬಂದು ನಾಳೆ ನಿಮ್ಮನ್ನು ಭೇಟಿ ಮಾಡಬೇಕು ಎಂದು ಹೇಳಿದ. ನಾನು ಅವನಿಗೆ ಸಿಗದೆ ನನ್ನ ಫ್ರೆಂಡ್ಸ್ ಜತೆ ಹೊರಟು ಹೋಗಿದ್ದೆ. ಹೇಗೋ ನನ್ನ ಮಾಹಿತಿ ಸಂಗ್ರಹ ಮಾಡಿಕೊಂಡಿದ್ದ. ಆಗ ನನ್ನ ಬಳಿ ಮೊಬೈಲ್ ಇರಲಿಲ್ಲ. ಅಮ್ಮನ ಮೊಬೈಲ್ಗೆ ಒಂದೆರಡು ಬಾರಿ ಕರೆ ಮಾಡಿದ್ದ. ಅಮ್ಮ ಕರೆ ಸ್ವೀಕಾರ ಮಾಡಿದರೆ ಕಟ್ ಮಾಡುತ್ತಿದ್ದ. ನಾನು ರಿಸೀವ್ ಮಾಡಿದರೆ ಮಾತನಾಡಲು ಪ್ರಯತ್ನಿಸುತ್ತಿದ್ದ. ಆಗ ನಾನು ನನ್ನ ಸ್ನೇಹಿತೆ ಮೂಲಕ ಅಮ್ಮನ ರೀತಿ ಮಾತನಾಡಿಸಿ ಇನ್ನು ಮುಂದೆ ನನ್ನ ಮಗಳಿಗೆ ತೊಂದರೆ ಕೊಡಬೇಡ ಎಂದು ಒಂದು ರೀತಿ ಬೆದರಿಕೆ ಹಾಕಿಸಿದ್ದೆ.
ಇದೆಲ್ಲ ಆಗುವಷ್ಟರಲ್ಲಿ 8 ತಿಂಗಳು ಕಳೆದಿದ್ದವು. ಅಮ್ಮನ ಮೊಬೈಲ್ಗೆ ಗುಡ್ ಮಾರ್ನಿಂಗ್ ಮೆಸೇಜ್ಗಳು ಬರುತ್ತಿದ್ದವು. ಇದನ್ನು ಗಮನಿಸಿದ ಅಮ್ಮ ನನ್ನನ್ನು ಪ್ರಶ್ನೆ ಮಾಡಿದರು. ಆಗ ನಾನೇ ನೇರವಾಗಿ ಅವನಿಗೆ ಕರೆ ಮಾಡಿ ನನಗೆ ಇದೆಲ್ಲ ಇಷ್ಟವಾಗುವುದಿಲ್ಲ. ತೊಂದರೆ ಕೊಡಬೇಡ ಎಂದು ಹೇಳಿ ಕಾಲ್ ಕಟ್ ಮಾಡಿದೆ. ಅಕ್ಟೋಬರ್ನಲ್ಲಿ ಒಂದು ದಿನ ಕರೆ ಮಾಡಿ ಹ್ಯಾಪಿ ಬರ್ತ್ ಡೇ ಎಂದ. ಆದರೆ ಆ ದಿನ ನನ್ನ ಜನ್ಮ ದಿನ ಆಗಿರಲಿಲ್ಲ. ಅವನ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ್ದೆ. ಕರೆ ಕಟ್ ಮಾಡಿದ ನಂತರ ಅರೆ, ಅವನೊಂದಿಗೆ ಏಕೆ ಮಾತನಾಡಿದೆ ಎಂದು ಯೋಚನೆ ಮಾಡಿದೆ. ಅವನ ಮುಖ ಕೂಡ ನನಗೆ ನೆನಪಿರಲಿಲ್ಲ. ಡಿಸೆಂಬರ್ 1ರಂದು ಭೇಟಿ ಮಾಡಲು ನಿರ್ಧರಿಸಿದೆವು. ಸಾಧ್ಯವಾಗಲಿಲ್ಲ. ಹೀಗಾಗಿ ಸಂಜೆ ಫೋನ್ ಮಾಡಿ ನೇರವಾಗಿ ಪ್ರಪೋಸ್ ಮಾಡಿಯೇ ಬಿಟ್ಟ. ಸ್ವಲ್ಪ ಸಮಯ ತೆಗೆದುಕೊಂಡ ನಂತರ ನಾನೂ ಗ್ರೀನ್ ಸಿಗ್ನಲ್ ನೀಡಿದೆ. ಪ್ರೀತಿಸಿ 8 ವರ್ಷಗಳ ನಂತರ ಅಮ್ಮನ ಸಮ್ಮತಿಯೊಂದಿಗೆ ಸಪ್ತಪದಿ ತುಳಿದೆವು. ನಮ್ಮ ಪ್ರೀತಿಗೆ ಈಗ 12 ವರ್ಷ. ನಮಗೊಬ್ಬ ಮುದ್ದು ರಾಜಕುಮಾರ ಇದ್ದಾನೆ. ಪ್ರೀತಿಯ ಒರತೆ ಬತ್ತಿಲ್ಲ.
| ಕೆ. ಬಿಂದು ಅರುಣ ಬೆಂಗಳೂರು