

ಬೆಂಗಳೂರು: ಕಳೆದ ಎರಡು ದಿನಗಳ ಹಿಂದಷ್ಟೇ ‘ಡಾರ್ಲಿಂಗ್’ ಕೃಷ್ಣ ಮತ್ತು ರಚಿತಾ ರಾಮ್ ನಟಿಸಲಿರುವ ಚಿತ್ರಕ್ಕೆ ‘ಲವ್ ಮೀ ಆರ್ ಹೇಟ್ ಮೀ’ ಎಂಬ ಟೈಟಲ್ ಅಂತಿಮವಾಗಿತ್ತು. ಹಾಗೆ ಘೋಷಣೆ ಆಗುತ್ತಿದ್ದಂತೆ ಇದೀಗ ಹೊಸದೊಂದು ವಿವಾದವೂ ಶೀರ್ಷಿಕೆಗೆ ಅಂಟಿಕೊಂಡಿದೆ. ‘ಸೈಕೋ’ ಸಿನಿಮಾ ಖ್ಯಾತಿಯ ನಿರ್ದೇಶಕ ದೇವದತ್ತ ಸಹ ಅದೇ ಹೆಸರಿನ ಸಿನಿಮಾ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ದೇವದತ್ತ, ‘ಲವ್ ಮೀ ಆರ್ ಹೇಟ್ ಮೀ’ ಎಂಬ ಶೀರ್ಷಿಕೆಯನ್ನು ಕಳೆದ ವರ್ಷದ ನವೆಂಬರ್ನಲ್ಲಿಯೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿರುವುದಾಗಿ ಹೇಳುತ್ತಾರೆ.
ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಇನ್ನೇನು ಚಿತ್ರೀಕರಣಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಆಗಿದೆ. ಲಾಕ್ಡೌನ್ ಮುಗಿದ ಮೇಲೆ ಚಿತ್ರೀಕರಣ ಪ್ರಾರಂಭಿಸುವ ಯೋಚನೆ ಹಾಕಿಕೊಂಡಿದ್ದ ದೇವದತ್ತ ಅವರಿಗೆ, ಅದೇ ಹೆಸರಿನಲ್ಲಿ ಇನ್ನೊಂದು ಚಿತ್ರ ತಯಾರಾಗುತ್ತಿರುವ ಸುದ್ದಿ ಕೇಳಿ ಶಾಕ್ ಆಗಿದೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಈ ವರ್ಷದ ಜನವರಿಯಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದ್ದೆವು. ಲಾಕ್ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿತ್ತು. ಹೀಗಿರುವಾಗಲೇ ದೀಪಕ್ ಗಂಗಾಧರ್ ಅವರು ಅದೇ ಶೀರ್ಷಿಕೆಯಲ್ಲಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.