ಅನಿತಾ ಭಟ್ ‘ಲವ್ ಮ್ಯಾಟ್ರು’!: ವಿರಾಟ್ ಬಿಲ್ವ ನಿರ್ದೇಶನದಲ್ಲಿ ಅಚ್ಯುತ್ ಕುಮಾರ್‌ಗೆ ಜೋಡಿಯಾದ ನಟಿ

anitha bhat
Published on

ಬೆಂಗಳೂರು : ‘ಸೈಕೋ’, ‘ಕಲಿವೀರ’, ‘ದ್ವಂದ್ವ’, ‘ಟಗರು’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್ ಇದೀಗ ‘ಲವ್ ಮ್ಯಾಟ್ರು’ ಮೂಲಕ ತೆರೆಗೆ ಬರಲು ಸಿದ್ಧರಾಗಿದ್ದಾರೆ. ವಿರಾಟ್ ಬಿಲ್ವ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಶುಕ್ರವಾರ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರ, ಪಾತ್ರ ಮತ್ತು ಮುಂದಿನ ಯೋಜನೆಗಳ ಕುರಿತು ಅನಿತಾ ಭಟ್ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘‘ಲವ್ ಮ್ಯಾಟ್ರು’ ಎರಡು -ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ಸಿನಿಮಾ. ಅದರಲ್ಲಿ ವಿರಾಟ್ ಬಿಲ್ವ ಶ್ರಮವಿದೆ. ಅವರು ಹೇಳಿದ ಕಥೆ ತುಂಬಾ ಇಷ್ಟವಾಗಿ ಚಿತ್ರದ ಭಾಗವಾದೆ. ಇದು ಎರಡು ಕಾಲಘಟ್ಟದ ಕಥೆ. ಒಂದು ಕಾಲಘಟ್ಟದಲ್ಲಿ ನಾನು ಮತ್ತು ಅಚ್ಯುತ್ ಕುಮಾರ್ ಇರುತ್ತೇವೆ. ಗಾಯತ್ರಿ ಎಂಬ ಪಾತ್ರ ನನ್ನದು. ಪ್ರೀತಿ, ಪ್ರೇಮಗಳ ಮಧ್ಯೆ ಜೀವನ ಎಷ್ಟು ಮುಖ್ಯ ಎಂಬುದನ್ನು ಸಾರುವ ಪಾತ್ರ. ಅಚ್ಯುತ್ ಕುಮಾರ್ ಜತೆ ಕೆಲಸ ಮಾಡಿದ ಅನುಭವ ತುಂಬ ಚೆನ್ನಾಗಿತ್ತು. ನಾನು ಸಹ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

ನಾವೇ ಅವಕಾಶ ಸೃಷ್ಟಿಸಿಕೊಳ್ಳಬೇಕು: ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿರುವ ಅನಿತಾ ಭಟ್ ಇದೀಗ ತಾವೇ ನಿರ್ಮಾಣ ಸಂಸ್ಥೆ ಆರಂಭಿಸಿ, ‘ಉಗ್ರಾಣ’ ಎಂಬ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ‘ಜೀವನದಲ್ಲಿ ಅವಕಾಶ ಹಾಗೂ ಅದೃಷ್ಟ ಮುಖ್ಯ. ಆದರೆ, ಅವಕಾಶಗಳು ನಮ್ಮನ್ನೇ ಹುಡುಕಿಕೊಂಡು ಬರಲಿ ಎಂದು ಕೂರಬಾರದು. ಅದರ ಬದಲು ನಾವೇ ವೇದಿಕೆ ಸೃಷ್ಟಿಸಿಕೊಳ್ಳಬೇಕು. ಇದರ ಭಾಗವಾಗಿ ನಾನೇ ಈಗ ನಿರ್ಮಾಣ ಸಂಸ್ಥೆ ಆರಂಭಿಸಿ, ‘ಉಗ್ರಾಣ’ ನಿರ್ಮಿಸುತ್ತಿದ್ದೇನೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ‘ಉಗ್ರಾಣ’ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ. ಹಾಗೇ ಕನ್ನಡದ ‘ಚಿಕ್ಕವರೆಲ್ಲ ಕೋಣರಲ್ಲ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜತೆಗೆ ಇನ್ನೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಂತದ ಶೂಟಿಂಗ್ ಪೂರ್ಣವಾಗಿದೆ. ಮುಂದಿನ ತಿಂಗಳು ಮತ್ತೊಂದು ಹಂತದ ಶೂಟಿಂಗ್ ಆರಂಭವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net