ಲಾರ್ಡ್ ಆಫ್ ದಿ ರಿಂಗ್ಸ್ ದಿ ರಿಂಗ್ಸ್ ಆಫ್ ಪವರ್

fgdfg
Published on

|ಹರ್ಷವರ್ಧನ್ ಬ್ಯಾಡನೂರು

ಮುಂಬೈಕಿರುತೆರೆ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್​ನ ಟಿವಿ ಸರಣಿ ಎಂಬ ಖ್ಯಾತಿ ‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ ಸರಣಿಗೆ ಸಲ್ಲುತ್ತದೆ. ‘ಲಾರ್ಡ್ ಆಫ್ ದಿ ರಿಂಗ್ಸ್’ ಮತ್ತು ‘ದಿ ಹಾಬಿಟ್’ ಕಥೆಗಿಂತಲೂ ಸಾವಿರಾರು ವರ್ಷಗಳ ಹಿಂದಿನ ಕಥೆಯನ್ನು ಈ ಸರಣಿಯಲ್ಲಿ ನೋಡಬಹುದಾಗಿದೆ. ಜೆಡಿ ಪೇಯ್್ನ ಮತ್ತು ಪ್ಯಾಟ್ರಿಕ್ ಮೆಕ್​ಕೇ, ಜೆಆರ್​ಆರ್ ಟಾಲ್ಕೀನ್ ಅವರ ‘ಲಾರ್ಡ್ ಆಫ್ ದಿ ರಿಂಗ್ಸ್’ ಕಥೆಯನ್ನು ಕೆದಕಿ, ಹೇಳಿರದ ವಿಷಯಗಳನ್ನು ಹೆಕ್ಕಿ ಅದಕ್ಕೆ ದೃಶ್ಯರೂಪ ನೀಡಿದ್ದಾರೆ. ಬರೋಬ್ಬರಿ 1 ಬಿಲಿಯನ್ ಡಾಲರ್ (7800 ಕೋಟಿ ರೂ.) ಬಜೆಟ್​ನಲ್ಲಿ ನಿರ್ವಣವಾಗಿರುವ ಈ ಟಿವಿ ಸರಣಿ, ಇದೇ ಸೆ. 2ರಂದು ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗಲಿದೆ.

ಇಂಗ್ಲೀಷ್, ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿಶ್ವದಾದ್ಯಂತ ಮೂವತ್ತು ಭಾಷೆಗಳಲ್ಲಿ ಈ ಸರಣಿ ಮೂಡಿಬರಲಿದೆ. ಹೀಗಾಗಿಯೇ ಪ್ರಚಾರಕ್ಕಾಗಿ ‘ದಿ ರಿಂಗ್ಸ್ ಆಫ್ ಪವರ್’ ಮತ್ತು ಅಮೆಜಾನ್ ಪ್ರೖೆಮ್ ತಂಡ ವಿಶ್ವದಾದ್ಯಂತ ನಾಲ್ಕು ದೇಶಗಳಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಲಾಸ್ ಏಂಜಲೀಸ್, ಮೆಕ್ಸಿಕೋ, ಲಂಡನ್ ಜತೆಗೆ ಮುಂಬೈನಲ್ಲೂ ಕಾರ್ಯಕ್ರಮ ನಡೆಯಿತು. ಹೀಗಾಗಿಯೇ ದೇಶಾದ್ಯಂತ ಹಲವು ರಾಜ್ಯಗಳ, ಭಾಷೆಗಳ ಹೆಸರಾಂತ ಪತ್ರಿಕೆಗಳು, ವಾಹಿನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಮಾತ್ರವಲ್ಲ ಆಸ್ಟ್ರೇಲಿಯಾ, ಚೀನಾ, ಸೇರಿದಂತೆ ಹಲವು ದೇಶಗಳಿಂದಲೂ ಪತ್ರಕರ್ತರು ಆಗಮಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಏಕೈಕ ಕನ್ನಡ ದಿನಪತ್ರಿಕೆ ವಿಜಯವಾಣಿ.

ಹೃತಿಕ್, ತಮನ್ನಾ ನಿರೂಪಣೆ

ಈ ಹಾಲಿವುಡ್ ಪ್ರಾಜೆಕ್ಟ್​ನ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ತಮನ್ನಾ ಭಾಟಿಯಾ ನಿರೂಪಣೆ ಮಾಡಿದರು. ‘ಲಾರ್ಡ್ ಆಫ್ ದಿ ರಿಂಗ್ಸ್’ ಸರಣಿಯಲ್ಲಿ ನಟಿಸಲು ಅವಕಾಶ ನೀಡುವಂತೆ ತಮಾಷೆಯಾಗಿಯೇ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ‘... ದಿ ರಿಂಗ್ಸ್ ಆಫ್ ಪವರ್’ನ ಶೋರನ್ನರ್ ಜೆಡಿ ಪೇಯ್್ನ ಚಾರ್ಲ್ಸ್ ಎಡ್ವರ್ಡ್ಸ್, ಎಮಾ ಹೊರ್ವಾತ್, ಲಾಯ್್ಡ ಓವೆನ್, ಮಾರ್ಕೆಲಾ ಕಾವೆನಾ, ಮ್ಯಾಕ್ಸಿಮ್ ಬಾಲ್ಡ್​ರಿ, ಮೆಗಾನ್ ರಿಚರ್ಡ್ಸ್, ನಜಾನಿನ್ ಬೊನಿಯಾಡಿ, ಸಾರಾ ಜ್ವಾಂಗೊಬಾನಿ, ಟೈರೊ ಮುಹಾಫಿಡಿನ್ ಪಾಲ್ಗೊಂಡಿದ್ದರು. 

ಶೋರನ್ನರ್ ಜೆಡಿಗೆ ಸಂತನ ಸ್ವಾಗತ

‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ನ ಶೋ ರನ್ನರ್ ಮತ್ತು ಕಾರ್ಯಕಾರಿ ನಿರ್ವಪಕ ಜೆಡಿ ಪೇಯ್್ನ ಅವರಿಗೆ ಇದು ಮೊದಲ ಭಾರತ ಭೇಟಿ. ಮುಂಬೈಗೆ ಬಂದ ಕೆಲವೇ ಹೊತ್ತಿನಲ್ಲಿ ಸನ್ಯಾಸಿಯೊಬ್ಬರು ಅವರ ಬಳಿ ಬಂದು ಆಶೀರ್ವದಿಸಿದರಂತೆ. ಆ ಬಗ್ಗೆ ಹೇಳಿಕೊಳ್ಳುವ ಜೆಡಿ ಪೇಯ್್ನ , ‘ನನಗೆ ಬಾಲ್ಯದಿಂದಲೂ ಭಾರತದ ಗೆಳೆಯರಿದ್ದರು. ಭಾರತದ ಸಂಸ್ಕೃತಿ, ಆಹಾರ, ಸಂಗೀತ ಎಲ್ಲವೂ ನನಗೆ ಬಲು ಇಷ್ಟ. ಭಾರತಕ್ಕೆ ಬರುವುದು ನನ್ನ ಕನಸಾಗಿತ್ತು, ಅದೀಗ ನನಸಾಗಿದೆ. ಮುಂಬೈಗೆ ಬಂದ ಕೆಲ ಹೊತ್ತಿನಲ್ಲೇ ಸಂತರೊಬ್ಬರು ನನ್ನ ಬಳಿ ಬಂದರು, ಹಣೆಗೆ ತಿಲಕವಿಟ್ಟು, ಬಲಗೈಗೆ ಈ ಕೆಂಪು,ಅರಿಶಿಣ ದಾರ ಕಟ್ಟಿ ಆಶೀರ್ವಾದ ಮಾಡಿದರು. ಈ ರೀತಿಯ ಸ್ವಾಗತ ನನಗೆ ತುಂಬ ಖುಷಿ ನೀಡಿತು’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ.

ಡಬ್ಬಾವಾಲಾಗಳ ಜತೆ ಊಟ!

ಪ್ರಚಾರದ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ ತಂಡ ಪಾಲ್ಗೊಂಡಿತು. ಮುಂಬೈನ ಹೆಸರಾಂತ ಗೇಟ್ ವೇ ಆಫ್ ಇಂಡಿಯಾಗೆ ಭೇಟಿ ನೀಡಿ, ಫೋಟೋಶೂಟ್​ನಲ್ಲಿ ಕಲಾವಿದರು ಭಾಗವಹಿಸಿದರು. ಮಾತ್ರವಲ್ಲದೇ ಆಟೋಗಳನ್ನೇರಿ ಬಂದ ‘ದಿ ರಿಂಗ್ಸ್ ಆಫ್ ಪವರ್’ ತಂಡ, ಡಬ್ಬಾವಾಲಗಳ ಜತೆ ಫೈವ್ ಸ್ಟಾರ್ ಹೋಟೆಲ್​ನಲ್ಲಿ ಊಟ ಮಾಡಿ ಸಂಭ್ರಮಿಸಿದರು. ಇನ್ನು ಬಾಲಿವುಡ್​ನ ಕರಣ್ ಜೋಹರ್, ಅಹಾನಾ ಕುಮ್ರಾ, ವಿಕ್ರಮಾದಿತ್ಯ ಮೊಟ್ವಾನೆ, ಜಿಮ್ ಸರ್ಭ್, ಕೃತಿಕಾ ಕಾಮ್ರಾ, ನಿಖಿಲ್ ಅಡ್ವಾನಿ, ರಸಿಕಾ ದುಗ್ಗಲ್, ಸಯಾನಿ ಗುಪ್ತಾ ಸೇರಿದಂತೆ ಹಲವರ ಜತೆ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net