

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ದುನಿಯಾ' ಚಿತ್ರದಲ್ಲಿ ಲೂಸ್ ಮಾದನಾಗಿ ಮಿಂಚಿದ್ದ ನಟ ಯೋಗೇಶ್, ಆ ಬಳಿಕ ಲೂಸ್ ಮಾದ ಯೋಗೇಶ್ ಎಂದೇ ಜನಪ್ರಿಯರಾದರು. ಇದೀಗ 18 ವರ್ಷಗಳ ಬಳಿಕ ಅವರ "ಲೂಸ್ ಮಾದ' ಪಾತ್ರವೇ ಸಿನಿಮಾ ರೂಪ ಪಡೆಯಲಿದೆ. ರಂಜಿತ್ ಕುಮಾರ್ ಗೌಡ ಆ್ಯಕ್ಷನ್&ಕಟ್ ಹೇಳುತ್ತಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿತು. ಯೋಗಿ ತಂದೆ ನಿರ್ಮಾಪಕ ಟಿ.ಪಿ. ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಲಕ ತೋರಿದರೆ, ಚಿತ್ರದ ನಿರ್ಮಾಪಕ ಧಮೇರ್ಂದ್ರ ಕ್ಯಾಮರಾ ಚಾಲನೆ ಮಾಡಿದರು.
"ಲೂಸ್ ಮಾದ' ಶೀರ್ಷಿಕೆಗೆ "ದ ವೂಲ್ಫ್' ಎಂಬ ಅಡಿಬರಹವಿದ್ದು, ಚಿತ್ರದ ಬಗ್ಗೆ ನಿರ್ದೇಶಕ ರಂಜಿತ್, "ಇದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಇದೇ ತಿಂಗಳ 25ರಿಂದ ಶೂಟಿಂಗ್ ಪ್ರಾರಂಭವಾಗಲಿದ್ದು, ಒಂದೇ ಹಂತದಲ್ಲಿ ಉಡುಪಿ, ಸುರತ್ಕಲ್, ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. ಎಲ್ಲ ಪ್ರಾಣಿಗಳಿಗಿಂತ ತೋಳಗಳನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನೂ ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಅದೇ ರೀತಿ. ಯಾವುದಕ್ಕೂ ಅಂಜದ ಹುಡುಗ' ಎಂದು ಮಾಹಿತಿ ನೀಡುತ್ತಾರೆ. ಯೋಗಿಗೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಆದರೆ, ಕಿಶೋರ್, ಅಚ್ಯುತ್ ಕುಮಾರ್, ಆದಿ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ ತಾರಾಗಣದಲ್ಲಿದ್ದಾರೆ.
ಯೋಗಿ, "ಈ ಹಿಂದೆ ಹಲವರು "ಲೂಸ್ ಮಾದ' ಶೀರ್ಷಿಕೆಯಲ್ಲಿ ಸಿನಿಮಾ ಮಾಡಲು ಬಂದಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ, ರಂಜಿತ್ ಹೇಳಿದ ಕಥೆಗೆ ಶೀರ್ಷಿಕೆ ಪೂರಕವಾಗಿದೆ. ಅವರ ಜತೆ "ಕಂಸ' ಎಂಬ ಸಿನಿಮಾ ಮಾಡಬೇಕಿತ್ತು. ಆದರೆ, ಬಜೆಟ್ ಕಾರಣ ಚಿತ್ರ ಆಗಲಿಲ್ಲ. ಇಂಗ್ಲೀಷ್ನ "ಐರಿಶ್ಮ್ಯಾನ್' ಚಿತ್ರದಂತೆ ಸ್ಟೆ$ಲಿಶ್ ಮಾಫಿಯಾ ಬಾಸ್ ಲುಕ್ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ. ಉಳಿದಂತೆ ಚಿತ್ರಕ್ಕೆ ಪ್ರದಿಪ್ ರೆಡ್ಡಿ ಛಾಯಾಗ್ರಹಣ, ರಂಜನ್ ಸಂಕಲನ, ಶಶಾಂಕ್ ಶೇಷಗಿರಿ ಸಂಗೀತವಿರಲಿದೆ.
ಸಿನಿಮಾ ಅಥವಾ ಪಾತ್ರದ ಹೆಸರಿನಿಂದ ಕಲಾವಿದರು ಗುರುತಿಸಿಕೊಳ್ಳುವುದು ಕಾಮನ್. ಹಾಗೇ ಒಂದು ಚಿತ್ರದಲ್ಲಿ ತಾವು ನಟಿಸಿದ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಅದೇ ಹೆಸರಿನಲ್ಲಿ ಸಿನಿಮಾ ಮಾಡುವುದು ಸಾಮಾನ್ಯ. ಆದರೆ, ನಟ ಯೋಗೇಶ್ ಅರ್ಥಾತ್ ಲೂಸ್ ಮಾದ ಯೋಗಿ ಈ ವಿಷಯದಲ್ಲಿ ಭಿನ್ನ. ಏಕೆಂದರೆ "ದುನಿಯಾ' ಚಿತ್ರದ ಈ ಲೂಸ್ ಮಾದ, ಬಳಿಕ ತಮ್ಮದೇ ಹೆಸರಿನ "ಯೋಗಿ', "ಯೋಗಿ ದುನಿಯಾ' ಚಿತ್ರಗಳಲ್ಲಿ ನಟಿಸಿದ್ದರು. ಇದೀಗ "ಲೂಸ್ ಮಾದ'ನಾಗಿದ್ದಾರೆ. ಆ ಮೂಲಕ ಒಬ್ಬ ನಟ ತನ್ನದೇ ಹೆಸರಿನ ಮೂರನೇ ಚಿತ್ರದಲ್ಲಿ ನಾಯಕನಾಗಿರುವ ದಾಖಲೆ ಬರೆದಿದ್ದಾರೆ.