ಕಮಲ್​ ಹಾಸನ್​ಗೆ ಆಕ್ಷನ್​-ಕಟ್​ ಹೇಳಲಿರುವ 'ಮಾಸ್ಟರ್​' ನಿರ್ದೇಶಕ ...

Kamal Haasan - Final
Published on

ಚೆನ್ನೈ: ಲಾಕ್​ಡೌನ್​ಗೂ ಮುನ್ನ 'ಇಂಡಿಯನ್​ 2' ಚಿತ್ರದಲ್ಲಿ ನಟಿಸುತ್ತಿದ್ದರು ಕಮಲ್​ ಹಾಸನ್​. ಈಗ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ, ಸದ್ಯದಲ್ಲೇ ಆ ಚಿತ್ರದ ಬಾಕಿ ಇರುವ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 'ಇವನೆಂದ್ರು ನಿನೈತ್ತಾಯ್​' ಹೆಸರಿನ ಈ ಚಿತ್ರದಲ್ಲಿ ಅವರು ಹೀರೋ ಆಗಿ ನಟಿಸುತ್ತಿರುವುದಷ್ಟೇ ಅಲ್ಲ, ತಮ್ಮ ರಾಜಕಮಲ್​ ಫಿಲಂಸ್​ ಇಂಟರ್​ನ್ಯಾಷನಲ್​ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಯಾರು ಗೊತ್ತಾ? ಕಾಲಿವುಡ್​ನ ಅತ್ಯಂತ ಬೇಡಿಕೆಯ ನಿರ್ದೇಶಕರಾಗಿರುವ ಲೋಕೇಶ್​ ಕನಕರಾಜ್​. ಸದ್ಯ ವಿಜಯ್​ ಅಭಿನಯದ 'ಮಾಸ್ಟರ್​' ಚಿತ್ರವನ್ನು ಮುಗಿಸಿ ಬಿಡುಗಡೆಗೆ ಕಾಯುತ್ತಿರುವ ಲೋಕೇಶ್​, ಲಾಕ್​ಡೌನ್​ ಸಮಯದಲ್ಲಿ ಒಂದು ಕಥೆ ಮಾಡಿ ಕಮಲ್​ ಹಾಸನ್​ಗೆ ಹೇಳಿದ್ದಾರೆ. ಕಥೆ ಕೇಳಿ ಇಂಪ್ರೆಸ್​ ಆಗಿರುವ ಕಮಲ್​, ತಮ್ಮ 232ನೇ ಚಿತ್ರದ ಜವಾಬ್ದಾರಿಯನ್ನು ಲೋಕೇಶ್​ಗೆ ಕೊಟ್ಟಿದ್ದಾರೆ.

ಲೋಕೇಶ್​, ತಮಿಳು ಚಿತ್ರರಂಗದಲ್ಲಿ ಬೆಳೆಯುತ್ತಿರುವ ರೀತಿ ನಿಜಕ್ಕೂ ಹಲವರಿಗೆ ಆಶ್ಚರ್ಯ ಹುಟ್ಟಿಸಿದೆ. 2017ರಲ್ಲಿ 'ಮಾನಗರಂ' ಎಂಬ ಚಿತ್ರ ನಿರ್ದೇಶಿಸಿದ್ದ ಅವರು, ಮೊದಲ ಚಿತ್ರದಲ್ಲೇ ಯಶಸ್ಸು ನೋಡಿದವರು. ಆ ನಂತರ, ಕಳೆದ ವರ್ಷ ಬಿಡುಗಡೆಯಾದ ಅವರದೇ ನಿರ್ದೇಶನದ 'ಖೈದಿ' ಸೂಪರ್​ ಹಿಟ್​ ಆಯಿತು. ಈ ಚಿತ್ರ ಮುಗಿಯುತ್ತಿದ್ದಂತೆಯೇ ಅವರಿಗೆ ವಿಜಯ್​ ಮತ್ತು ವಿಜಯ್​ ಸೇತುಪತಿ ಅಭಿನಯದ 'ಮಾಸ್ಟರ್​' ನಿರ್ದೇಶಿಸುವ ಅವಕಾಶ ಸಿಕ್ಕಿತು.

'ಮಾಸ್ಟರ್​' ಬಿಡುಗಡೆ ಆಗುವುದಕ್ಕೆ ಮುಂಚೆಯೇ, ಲೋಕೇಶ್​ಗೆ ಕಮಲ್​ ಹಾಸನ್​ ಅವರಂತಹ ದೊಡ್ಡ ನಟರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ. 'ಇವನೆಂದ್ರು ನಿನೈತ್ತಾಯ್​' ಚಿತ್ರವು 2021ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಚಿತ್ರದಲ್ಲಿ ಅವರು ಏನೆಲ್ಲಾ ಕಮಾಲ್​ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net