ನಿಮ್ಮ ಕಥೆಯಲ್ಲಿ ಅದು ಇಲ್ಲ... ಸ್ಟಾರ್​ ನಿರ್ದೇಶಕ ಲೋಕೇಶ್​ ಚಿತ್ರವನ್ನೇ ತಿರಸ್ಕರಿಸಿದ ಸ್ಟಾರ್​ ನಟ..! Lokesh Kanagaraj

Lokesh Kanagaraj
Published on

ಚೆನ್ನೈ: ಲೋಕೇಶ್​​​ ಕನಗರಾಜ್​... ( Lokesh Kanagaraj ) ತಮಿಳು ಚಿತ್ರರಂಗದಲ್ಲಿ ಈ ಹೆಸರಿಗೆ ಒಂದು ಬೆಲೆ ಇದೆ. ಅನೇಕ ಸ್ಟಾರ್​ ನಟರೇ ನನಗೊಂದು ಸಿನಿಮಾ ಮಾಡಿಕೊಡಿ ಎಂದು ಸ್ಟಾರ್​ ನಿರ್ದೇಶಕ ಲೋಕೇಶ್ ಹಿಂದಿ ಬಿದ್ದಿದ್ದಾರೆ. ಅಲ್ಲದೆ, ಒಂದು ಸಿನಿಮಾ ಮಾಡಿಕೊಡಲು ನಿರ್ಮಾಪಕರು ಕೂಡ ಕೋಟಿಗಟ್ಟಲೆ ಸಂಭಾವನೆ ಕೊಡಲು ಮುಂದಾಗಿದ್ದಾರೆ. ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಲೋಕೇಶ್​, ಸತತವಾಗಿ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡುವ ಮೂಲಕ ಈ ಹಂತಕ್ಕೆ ಬೆಳೆದಿದ್ದಾರೆ.

ಖೈದಿ, ಮಾಸ್ಟರ್, ವಿಕ್ರಮ್ ಹಾಗೂ ಲಿಯೋ ಮುಂತಾದ ಸಿನಿಮಾಗಳ ಮೂಲಕ ಒಂದರ ನಂತರ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ಲೋಕೇಶ್​ ನೀಡಿದ್ದಾರೆ. ಈ ಸಿನಿಮಾಗಳಿಂದ ಲೋಕೇಶ್ ಅವರ ರೇಂಜ್ ಕೂಡ ಹೆಚ್ಚಾಗಿದೆ. ಆದರೆ, ಈಗ ಒಂದೇ ಒಂದು ಫ್ಲಾಪ್ ಅವರನ್ನು ಕೆಳಕ್ಕೆ ಇಳಿಸಿದೆ. ಇಲ್ಲಿಯವರೆಗೆ ಸರಣಿ ಅವಕಾಶಗಳನ್ನು ಪಡೆದಿದ್ದ ಈ ಸ್ಟಾರ್ ನಿರ್ದೇಶಕನ ಕೈಯಲ್ಲಿ ಈಗ ಒಂದೇ ಒಂದು ಚಿತ್ರವಿಲ್ಲ.

ಲೋಕೇಶ್ ಅವರು ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಜತೆ ಕೂಲಿ ಹೆಸರಿನಲ್ಲಿ ಸಿನಿಮಾ ಮಾಡಿದರು. ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಈ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಇದರ ಪರಿಣಾಮ ಈ ನಿರ್ದೇಶಕರ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರಿದೆ. ಯಾವುದೇ ನಾಯಕ ಅಥವಾ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತಿಲ್ಲ ಎಂಬ ವರದಿಗಳಿವೆ.

ಇನ್ನು ಬಜೆಟ್ ಕಾರಣಗಳಿಂದಾಗಿ ಖೈದಿ 2 ಸಿನಿಮಾ ಈಗಾಗಲೇ ರದ್ದಾಗಿದೆ ಎಂಬ ಸುದ್ದಿ ತಮಿಳುನಾಡಿನಲ್ಲಿ ವೈರಲ್ ಆಗುತ್ತಿದೆ. ಆದರೆ, ನಿರ್ಮಾಪಕರಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇದೇ ವೇಳೆ ಲೋಕೇಶ್ ಅವರು ಇತ್ತೀಚೆಗೆ ಸ್ಟಾರ್ ಹೀರೋ ಒಬ್ಬರಿಗೆ ಕಥೆ ಹೇಳಿದ್ದಾರೆ ಎಂಬ ಮಾತಿದೆ. ಆದರೆ, ಆ ಕತೆಯನ್ನು ಹೀರೋ ತಿರಸ್ಕರಿಸಿದ್ದಾರೆ ಎಂದು ವರದಿಯಾಗುತ್ತಿದೆ.

ಅಂದಹಾಗೆ, ಆ ಸ್ಟಾರ್ ಹೀರೋ ಬೇರೆ ಯಾರೂ ಅಲ್ಲ ಅವರೇ ಸಕಲಕಲಾವಲ್ಲಭ ಕಮಲ್ ಹಾಸನ್. ಹೌದು, ಲೋಕೇಶ್ ಕನಗರಾಜ್ ಇತ್ತೀಚೆಗೆ ಕಮಲ್ ಅವರನ್ನು ಭೇಟಿಯಾಗಿ ಮಾಫಿಯಾ ಹಿನ್ನೆಲೆಯ ಕಥೆಯನ್ನು ಹೇಳಿದ್ದರಂತೆ ಆದರೆ, ಕಮಲ್ ಆ ಕಥೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರ ಕಾಂಬೋದಲ್ಲಿ ಈ ಹಿಂದೆ ಬಿಡುಗಡೆಯಾದ ವಿಕ್ರಮ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿ, ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿ, ಕಮಲ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಆಯಿತು.

ಇದೀಗ ಅದೇ ಪರಿಚಯದೊಂದಿಗೆ ಕಮಲ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡಲು ಲೋಕೇಶ್​ ಪ್ಲ್ಯಾನ್​​ ಮಾಡುತ್ತಿದ್ದಾರೆ. ಆದರೆ, ಕಥೆಯಲ್ಲಿ ಯಾವುದೇ ಹೊಸತನವಿಲ್ಲದ ಕಾರಣ ಕಮಲ್ ಅವರು ಅದನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಇದೆ. ಇದೇ ಸುದ್ದಿ ಇದೀಗ ತಮಿಳುನಾಡಿನಲ್ಲಿ ವೈರಲ್ ಆಗಿದೆ. ಲೋಕೇಶ್​ಗೆ ಮತ್ತೆ ಯಾವ ಸ್ಟಾರ್ ಅವಕಾಶ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net