

ಬೆಂಗಳೂರು:ಸಾಮಾನ್ಯವಾಗಿ ನಿರ್ದೇಶಕರು ಒಂದು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿ, ಅದು ರಿಲೀಸ್ ಆದ ಬಳಿಕವಷ್ಟೇ ಹೊಸ ಚಿತ್ರದತ್ತ ಗಮನ ಹರಿಸುತ್ತಾರೆ. ಆದರೆ, ನಿರ್ದೇಶಕ ಬಿ. ಲೋಕೇಶ್ ವಿಭಿನ್ನ. ಏಕೆಂದರೆ ಅವರು ನಿರ್ದೇಶಿಸುತ್ತಿರುವ ‘ಟೆಡ್ಡಿ ಬೇರ್’, ‘ವಿದುರ’ ಹಾಗೂ ‘ಸುಡೊಕು’ ಚಿತ್ರಗಳು ಬೇರೆ ಬೇರೆ ಹಂತದಲ್ಲಿವೆ.
ಇತ್ತೀಚೆಗಷ್ಟೆ ಲೋಕೇಶ್ ಹುಟ್ಟುಹಬ್ಬದಂದು ಈ ಮೂರೂ ಚಿತ್ರಗಳ ಟ್ರೇಲರ್ ಮತ್ತು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡ ಶುಭಹಾರೈಸಿದೆ. ಲೊಕೇಶ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ‘ಟೆಡ್ಡಿ ಬೇರ್’. ಇದೊಂದು ಹಾರರ್ ಚಿತ್ರವಾಗಿದ್ದು, ಹೊಸ ಮನೆಗೆ ಹೋಗುವ ನವದಂಪತಿ ಎದುರಿಸವ ವಿಚಿತ್ರ ಘಟನೆಗಳ ಸುತ್ತ ಕಥೆ ಸಾಗುತ್ತದೆ. ಚಿತ್ರದಲ್ಲಿ ಶೈಲಜಾ, ದೀನಾ, ಮುತ್ತು, ಸ್ಪರ್ಶರೇಖಾ, ಅಕ್ಷರ ಪ್ರಮುಖ ತಾರಾಗಣದಲ್ಲಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮತ್ತೊಂದು ಚಿತ್ರ ‘ವಿದುರ’ ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಾಯಕ ತನ್ನ ಕುಟುಂಬಕ್ಕಾಗಿ ಹೇಗೆಲ್ಲಾ ಹೋರಾಡುತ್ತಾನೆ ಎಂಬುದು ಕಥೆಯ ತಿರುಳು. ಚೈತ್ರಾ ತೊಂಟದ್, ಮುತ್ತು, ರಾಜಶೇಖರ್, ಲಕ್ಷ್ಮೀ, ಸಂತೋಷ್, ಕಿಟ್ಟಿ ತಾರಾಗಣದಲ್ಲಿದ್ದಾರೆ. ಸದ್ಯ ಈ ಚಿತ್ರ ಡಬ್ಬಿಂಗ್ ಹಂತದಲ್ಲಿದೆ.
ಹಾಗೆಯೇ ಲೋಕೇಶ್ ನಿರ್ದೇಶಿಸುತ್ತಿರುವ ಮೂರನೇ ಚಿತ್ರ ‘ಸುಡೊಕು’. ಇದೊಂದು ಡಿಟೆಕ್ಟಿವ್ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಕೊಲೆಗಳ ತನಿಖೆಯ ಸುತ್ತ ಕಥೆ ಸಾಗುತ್ತದೆ. ಸ್ವಾತಿ, ಯಶಸ್ವಿನಿ, ಬೇಬಿ ಆಯುಷಿ, ಶೀಲಾ, ಶಾರದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೂರೂ ಚಿತ್ರಗಳಲ್ಲು ಭಾರ್ಗವ್ ನಾಯಕನಾಗಿದ್ದಾರೆ.